ರಾಜ್‌ಕೋಟ್: ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್‌ಕೋಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು. ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು ಒಟ್ಟು 2500 ಎಕರೆಗೂ ಹೆಚ್ಚು ಭೂ ಪ್ರದೇಶದಲ್ಲಿ 1400 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಉಪಸ್ಥಿತರಿದ್ದರು. ನೂತನ ವಿಮಾನ ನಿಲ್ದಾಣವು ಆಧುನಿಕ ತಂತ್ರಜ್ಞಾನ ಮತ್ತು ಸುಸ್ಥಿರ ವೈಶಿಷ್ಟ್ಯಗಳ ಸಮ್ಮಿಲನವನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ರಾಜ್‌ಕೋಟ್‌ನ ಹೊಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿಯೊಂದಿಗೆ ದೇಶದಾದ್ಯಂತ ವಾಯು ಸಂಪರ್ಕವನ್ನು ಸುಧಾರಿಸುವ ಪ್ರಧಾನ ಮಂತ್ರಿಯ ದೃಷ್ಟಿಕೋನವು ಪೂರ್ಣಗೊಳ್ಳುತ್ತದೆ ಎಂದು ಅದು ಹೇಳಿದೆ.
ಅಕ್ಟೋಬರ್ 2017 ರಲ್ಲಿ, ಪ್ರಧಾನಿ ಮೋದಿ ಅವರು ರಾಜ್‌ಕೋಟ್ ನಗರದ ಸಮೀಪವಿರುವ ಹಿರಾಸರ್ ಗ್ರಾಮದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಶಿಲಾನ್ಯಾಸವನ್ನು ನೆರವೇರಿಸಿದರು. ಗುರುವಾರ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ನಂತರ, ಪ್ರಧಾನಿಯವರು ವಿಮಾನ ನಿಲ್ದಾಣದ ಆವರಣದಲ್ಲಿ ಸುತ್ತಾಡಿದರು ಮತ್ತು ಸೌಲಭ್ಯದ ತಾಂತ್ರಿಕ ಅಂಶಗಳನ ಬಗ್ಗೆ ಅಧಿಕಾರಿಗಳಿಂದ ತಿಳಿದುಕೊಂಡರು.
ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ರಾಜ್‌ಕೋಟ್ ನಗರದ ರೇಸ್ ಕೋರ್ಸ್ ಮೈದಾನದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲಿಂದ, ಪ್ರಧಾನಮಂತ್ರಿಯವರು ಸೌರಾಷ್ಟ್ರ ನರ್ಮದಾ ಅವತಾರನ್ ನೀರಾವರಿ (SAUNI) ಯೋಜನೆಯ 8 ಮತ್ತು 9 ಪ್ಯಾಕೇಜ್‌ಗಳನ್ನು ಸಮರ್ಪಿಸಲಿದ್ದಾರೆ.