ಲಕ್ನೋ: ಯುಪಿಯ ಬಲರಾಮ್‌ಪುರ ಪ್ರದೇಶದ 34 ಮದರಸಾಗಳನ್ನು ಶೀಘ್ರದಲ್ಲೇ ಮುಚ್ಚಲಾಗುತ್ತಿದೆ. ಈ 34 ಮದರಸಾಗಳಿಗೆ ಐದು ಬಾರಿ ಪತ್ರಗಳನ್ನು ನೀಡಿ ದಾಖಲೆಗಳನ್ನು ನೀಡುವಂತೆ ಕೇಳಲಾಗಿತ್ತು, ಆದರೂ ಈ ಮದರಸಾಗಳು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಂಪನ್ಮೂಲಗಳ ವಿವರಗಳನ್ನು U-DICE ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿಲ್ಲ ಎಂದು ತಿಳಿದುಬಂದಿದೆ.
ಇದಾದ ನಂತರ ಕಠಿಣ ನಿಲುವು ತಳೆದ ಅಲ್ಪಸಂಖ್ಯಾತ ಇಲಾಖೆ ಅದರ ಮಾನ್ಯತೆ ರದ್ದು ಮಾಡುವಂತೆ ಹೇಳಿದೆ. ಇದರಲ್ಲಿ 22 ಮದರಸಾಗಳು ನೇಪಾಳ ಗಡಿಯ ಪಕ್ಕದಲ್ಲಿರುವ ಡೆವಲಪ್‌ಮೆಂಟ್ ಬ್ಲಾಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, 12 ಮದರಸಾಗಳು ಜಿಲ್ಲೆಯ ಇತರ ಅಭಿವೃದ್ಧಿ ಬ್ಲಾಕ್‌ಗಳಲ್ಲಿವೆ ಎಂದು ವಿವರಿಸಿದೆ. ಯೋಗಿ ಸರ್ಕಾರವು ರಾಜ್ಯದ ಪ್ರತಿ ಮದರಸಗಳ ಮಾಹಿತಿಗಳನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುವುದನ್ನು ಕಡ್ಡಾಯಪಡಿಸಿದೆ.
ಜುಲೈ 31 ರೊಳಗೆ ವಿವರಗಳನ್ನು ಅಪ್‌ಲೋಡ್ ಮಾಡದಿದ್ದರೆ, ಅವರ ಮಾನ್ಯತೆ ರದ್ದುಪಡಿಸುವ ಎಚ್ಚರಿಕೆ ನೀಡಲಾಗಿದೆ. 2021-22ನೇ ಸಾಲಿನಲ್ಲಿ ಎಲ್ಲಾ ಮದರಸಾಗಳಲ್ಲಿ 65 ಸಾವಿರದ 878 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 2022-23ನೇ ಸಾಲಿನಲ್ಲಿ 34 ಮದರಸಾಗಳ ವಿವರಗಳನ್ನು ಅಪ್‌ಲೋಡ್ ಮಾಡದ ಕಾರಣ ವಿದ್ಯಾರ್ಥಿಗಳ ಸಂಖ್ಯೆ 20 ಸಾವಿರದ 763 ಕಡಿಮೆಯಾಗಿದೆ. ಇದೀಗ ಮದರಸಾಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 45 ಸಾವಿರದ 115ಕ್ಕೆ ಇಳಿದಿದೆ. ಇಲ್ಲಿಯವರೆಗೆ, 34 ಮದರಸಾಗಳು ಯು-ಡೈಸ್ ಪೋರ್ಟಲ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಂಖ್ಯೆ, ಆಧಾರ್, ಪುನರಾವರ್ತಿತ ವಿದ್ಯಾರ್ಥಿ, ನಕಲಿ ವಿದ್ಯಾರ್ಥಿ, ನಕಲಿ ಶಿಕ್ಷಕರು, ಶಾಲೆಯ ವಿವರ, ಶಿಕ್ಷಕರ ವಿವರ ಮತ್ತು ವಿದ್ಯಾರ್ಥಿಗಳ ವಿವರಗಳನ್ನು ಒದಗಿಸಿಲ್ಲ.