ಶಿವಮೊಗ್ಗ: ಪರಿಸರದಲ್ಲಾಗುವ ಪ್ರಕೃತಿ ವಿಕೋಪ ತಡೆಗೆ ಪರಿಸರ ಸಂರಕ್ಷಣೆಯೊಂದೇ ಪರಿಹಾರ ಎಂದು ಮಂಡಗದ್ದೆ ವಲಯ ಅರಣ್ಯ ಅಧಿಕಾರಿ ಪ್ರಸಾದ್ ತಿಳಿಸಿದರು.
ಅವರು ಮಂಡಗದ್ದೆ ವಲಯ ಅರಣ್ಯ ಪ್ರದೇಶದಲ್ಲಿ ನಿರ್ಮಲ ತುಂಗಾ ಅಭಿಯಾನವು ಕಮಲಾ ನೆಹರು ಮಹಿಳಾ ಕಾಲೇಜಿನ ಎನ್.ಎಸ್.ಎಸ್. ಘಟಕ, ಅರಣ್ಯ ಇಲಾಖೆ, ಪರ್ಯಾವರಣ ಗತಿ ವಿಧಿ, ಓಪನ್ ಮೈಂಡ್ ಸ್ಕೂಲ್, ತರಳಬಾಳು ಶಾಲೆ, ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ಶಿವಮೊಗ್ಗ ಮತ್ತಿತರ ಪರಿಸರ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಹಸಿರೀಕರಣ-ಗಿಡ ನೆಡುವ ಮತ್ತು ಬೀಜದುಂಡೆ ಬಿತ್ತನೆಯ ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡುತ್ತಿದ್ದರು.
ಮಾನವನ ಬದುಕಿಗೆ ಅರಣ್ಯ ಅತ್ಯವಶ್ಯಕ. ಕಾಡನ್ನು ಸಂರಕ್ಷಿಸಿದರೆ ಮಾತ್ರ ಮನುಷ್ಯ, ಪ್ರಾಣಿ ಪಕ್ಷಿಗಳು ಬದುಕಲು ಸಾಧ್ಯ ಎಂದ ಅವರು ಪ್ರತಿಯೊಬ್ಬರೂ ಗಿಡ ಮರ ಬೆಳೆಸಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದು ಮನವಿ ಮಾಡಿಕೊಂಡರು.
ಕಾಡಿನಲ್ಲಿ ಕೇವಲ ಮೃದು ಪ್ರಾಣಿಗಳು ಇದ್ದರೆ ಸಾಲದು. ಕ್ರೂರ ಪ್ರಾಣಿಗಳಾದ ಹುಲಿ, ಚಿರತೆ, ಸಿಂಹಗಳೂ ಇರಬೇಕು. ಅಂದಾಗ ಮಾತ್ರ ಕಾಡು ಮರ ಗಿಡ, ಪ್ರಾಣಿ ಪಕ್ಷಿಗಳಿಂದ ಸಮತೋಲನದಿಂದ ಸಮೃದ್ಧವಾಗಿರಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕಮಲಾ ನೆಹರು ಮಹಿಳಾ ಕಾಲೇಜಿನ ಎನ್.ಎಸ್.ಎಸ್.ವಿದ್ಯಾರ್ಥಿಗಳು, ಓಪನ್ ಮೈಂಡ್, ತರಳಬಾಳು ಶಾಲೆಯ ಪುಟಾಣಿ ಮಕ್ಕಳು ಸುರಿಯುವ ಮಳೆಯನ್ನೂ ಲೆಕ್ಕಿಸದೆ ಕಾಡಿನಲ್ಲಿ ಬೀಜದುಂಡೆ ಬಿತ್ತನೆ, ಕೆಲವು ಮುಖ್ಯವಾದ ಗಿಡಗಳನ್ನು ನೆಟ್ಟು ತಮ್ಮ ಪರಿಸರ ಕಾಳಜಿ ತೋರಿಸಿದ್ದು ನಿಜಕ್ಕೂ ಶ್ಲಾಘನೀಯ ಎಂದು ಅವರು ಹೇಳಿದರು.
ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಪ್ರಮುಖರಾದ ಬಸವರಾಜ ಪಾಟೀಲ್, ಮಾಧವನ್, ಉದ್ಯಮಿ ರಮೇಶ್ ಹೆಗ್ಡೆ, ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಡಾ.ಬಾಲಕೃಷ್ಣ ಹೆಗಡೆ, ಡಾ.ಎಲ್.ಕೆ.ಶ್ರೀಪತಿ, ಗೋಪಾಲಕೃಷ್ಣ ಭಾಗವತ, ಬಾಲು ನಾಯ್ಡು, ರಾಮು, ಗೀತಾ, ಅರಣ್ಯ ಇಲಾಖೆ ಸಿಬ್ಬಂದಿಗಳು ಮೊದಲಾದವರಿದ್ದರು.
ಗಿಡ ನೆಡುವ ಮೂಲಕ ಹುಟ್ಟು ಹಬ್ಬ ಆಚರಣೆ: ಸಾಮಾನ್ಯವಾಗಿ ಕೇಕ್ ತುಂಡರಿಸುವ ಮೂಲಕ, ಮೇಣದ ಬತ್ತಿ ಹಚ್ಚಿ ಅದನ್ನು ಆರಿಸುವ ಮೂಲಕ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುವುದನ್ನು ಕಾಣುತ್ತೇವೆ. ಆದರೆ ಅತ್ಯುತ್ತಮ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಎಂಬ ಪ್ರಶಸ್ತಿಗೆ ಭಾಜನರಾದ ಕಮಲಾ ನೆಹರು ಮಹಿಳಾ ಕಾಲೇಜಿನ ಡಾ.ಬಾಲಕೃಷ್ಣ ಹೆಗಡೆ ತಮ್ಮ ನೂರಾರು ವಿದ್ಯಾರ್ಥಿನಿಯರು, ಚಿಣ್ಣರು, ಪರಿಸರ ಕಾರ್ಯಕರ್ತರ ಸಮ್ಮುಖದಲ್ಲಿ ಕಾಡಿನಲ್ಲಿ ಮಂಗಗಳಿಗೆ ಅವಶ್ಯಕವಿರುವ ಪಿನಟ್ ಬಟರ್ ಫ್ರೂಟ್ ಎಂಬ ಗಿಡಗಳನ್ನು ನೆಡುವುದರ ಮೂಲಕ ಮತ್ತು ಬೀಜದುಂಡೆಗಳನ್ನು ಅಡವಿಯಲ್ಲಿ ಬಿತ್ತುವುದರ ಮೂಲಕ ಮಂಡಗದ್ದೆಯ ವಲಯ ಅರಣ್ಯ ಪ್ರದೇಶದಲ್ಲಿ ಭಾನುವಾರ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು ವಿಶೇಷವಾಗಿತ್ತು. ಇದು ಸೇರಿದ್ದ ನೂರಾರು ಪರಿಸರ ಪ್ರಿಯರ ಪ್ರಶಂಸೆಗೂ ಪಾತ್ರವಾಯಿತು. ಪ್ರತಿಯೊಬ್ಬರೂ ತಮ್ಮ ತಮ್ಮ ಹುಟ್ಟು ಹಬ್ಬವನ್ನು ಈ ರೀತಿ ಆಚರಿಸಿದರೆ ನಮಗೆ ತಿಳಿಯದಂತೆ ಪರಿಸರ ಸಂರಕ್ಷಣೆ ತಾನಾಗಿಯೇ ಆಗುತ್ತದೆ ಎಂಬ ಮಾತುಗಳು ಕೇಳಿಬಂದವು. ಅಲ್ಲಿದ್ದ ಎಲ್ಲರಿಗೂ ಡಾ.ಹೆಗಡೆ ಸಿಹಿ ವಿತರಿಸಿ ಜನ್ಮ ದಿನವನ್ನು ಸಂಭ್ರಮಿಸಿದರು.