ಕಾರವಾರ: ಗಡಿಭಾಗದ ಕನ್ನಡ ಶಾಲೆಯಲ್ಲಿ ಓದಿದ ಮಕ್ಕಳಿಗೆ ಉದ್ಯೋಗ, ಉನ್ನತ ಶಿಕ್ಷಣದಲ್ಲಿ ಮೀಸಲಾತಿಯನ್ನ ಕೊಡುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕನ್ನಡ ಘಟಕದ ಅಧ್ಯಕ್ಷ ಭಾಸ್ಕರ್ ಪಟಗಾರ್ ಆಗ್ರಹಿಸಿದ್ದಾರೆ.
ಕನ್ನಡ ಶಾಲೆಗಳ ಬಾಗಿಲು ಬಂದ್ ಆಗುತ್ತಿರುವ ಕುರಿತು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯನ್ನ ಉದ್ದೇಶಿಸಿ ಮಾತನಾಡಿದ ಅವರು ಕನ್ನಡ ಶಾಲೆಗಳು ಬಂದ್ ಆಗುತ್ತಿರುವುದಕ್ಕೆ ಸರ್ಕಾರದ ನಿರ್ಲಕ್ಷವೇ ಕಾರಣ ಎಂದು ಕಿಡಿಕಾರಿದರು. ಕಾರವಾರ ರಾಜ್ಯದ ಗಡಿ ಜಿಲ್ಲೆ. ಕಾರವಾರದಲ್ಲಿ ರಾಜ್ಯದ ಮಾತೃ ಭಾಷೆಯಾದ ಕನ್ನಡವನ್ನ ಉಳಿಸುವ ಕೆಲಸ ಆಗಬೇಕಾಗಿದೆ. ಕನ್ನಡಕ್ಕೆ ಕುತ್ತಾದಾಗ ಸರ್ಕಾರ, ಕನ್ನಡ ಪರ ಸಂಘಟನೆಗಳು ಒಟ್ಟಿಗೆ ಧ್ವನಿ ಎತ್ತಬೇಕು. ಕಾರವಾರದ ಗಡಿ ಭಾಗದಲ್ಲಿ ಸಾಕಷ್ಟು ಕನ್ನಡ ಶಾಲೆ ಮುಚ್ಚುತ್ತಿದೆ. ಕಳೆದ ಆರು ವರ್ಷದಿಂದ 14 ಶಾಲೆ ಮುಚ್ಚುತ್ತಿರುವುದು ದುರಂತ. ಕನ್ನಡ ಶಾಲೆ ಗಡಿ ಭಾಗದಲ್ಲಿ ಇರಬೇಕು. ಗಡಿಯಲ್ಲಿ ಇಂದಿಗೂ ಶಾಲೆಗಳು ಇದೆ. ಆದರೆ ಇಂಗ್ಲಿಷ್ ಶಾಲೆ ಹೆಚ್ಚಾಗಿ ಪ್ರಾರಂಭ ಆಗುತ್ತಿರುವುದು ಕನ್ನಡ ಶಾಲೆಗೆ ಕುತ್ತು ತಂದಿದೆ ಎಂದು ಹೇಳಿದರು.
ಕನ್ನಡ ಶಾಲೆಯಲ್ಲಿ ಓದಿ ದೊಡ್ಡ ದೊಡ್ಡ ಉದ್ಯೋಗ ಪಡೆದವರು, ದೊಡ್ಡ ಹಂತಕ್ಕೆ ಹೋದವರು ಹಲವರು ಇದ್ದಾರೆ. ಆದರೆ ಇತ್ತಿಚ್ಚಿಗೆ ಕನ್ನಡ ಶಾಲೆಗಳು ಮುಚ್ಚುತ್ತಿರುವುದು ದುರಂತವಾಗಿದೆ. ಅದರಲ್ಲೂ ಗಡಿ ಭಾಗದ ಕನ್ನಡ ಶಾಲೆ ಉಳಿವಿಗೆ ಸರ್ಕಾರ ಈ ಕೂಡಲೇ ಮೂಲಭೂತ ಸೌಕರ್ಯ ಒದಗಿಸಬೇಕು. ಶಾಲೆಗಳ ಅಭಿವೃದ್ದಿಗೆ ಆಕರ್ಷಕ ಕಟ್ಟಡ, ಕಂಪ್ಯೂಟರ್ ಶಿಕ್ಷಣ, ಆಟದ ಮೈದಾನ ನಿರ್ಮಾನ ಜೊತೆಗೆ ಹೆಚ್ಚಿನ ಶಿಕ್ಷಕರ ನಿಯೋಜನೆ ಮಾಡಬೇಕು ಎಂದರು. ಗಡಿಯಲ್ಲಿ ಒದಿದ ಮಕ್ಕಳಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಶಾಲೆಗಳ ಉಳಿವಿಗಾಗಿ ಸರ್ಕಾರಿ ಉದ್ಯೋಗದಲ್ಲಿ ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಒದಗಿಸಬೇಕು. ಆಗ ಪೋಷಕರು ಮಕ್ಕಳನ್ನ ಕನ್ನಡ ಶಾಲೆಗಳಿಗೆ ಕಳುಹಿಸಲು ಮುಂದಾಗುತ್ತಾರೆ. ಸದ್ಯ ಯಾವುದೇ ಉಪಯೋಗಗಳು ಇಲ್ಲದಿರುವುದರಿಂದ ಬೇರೆ ಶಾಲೆಯತ್ತ ಮುಖ ಮಾಡುತ್ತಿದ್ದಾರೆ.
ಈ ಬಗ್ಗೆ ಸರ್ಕಾರದ ಗಮನ ಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಸಂಘಟನೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರ ಜೊತೆ ಭೇಟಿ ಮಾಡಿ ವಿಶೇಷ ಸೌಲಭ್ಯಗಳನ್ನ ಒದಗಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇವೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಗಡಿಯಲ್ಲಿ ಶಾಲೆ ಮುಚ್ಚಬಾರದು. ಈ ಬಗ್ಗೆ ಹೋರಾಟಕ್ಕೂ ಸಿದ್ದ ಎಂದು ಭಾಸ್ಕರ್ ಪಟಗಾರ್ ಹೇಳಿದರು.
ಸಂಘಟನೆಯ ರಾಜಾ ಕಡವಾಡಕರ್ ಮಾತನಾಡಿ, ಕಾರವಾರ ತಾಲೂಕಿನ ಕಡವಾಡ ಗ್ರಾಮದಲ್ಲಿ ಮೂರು ಕನ್ನಡ ಶಾಲೆ ಇದೆ. ಆದರೆ ಎಲ್ಲವೂ ಬಾಗಿಲು ಮುಚ್ಚುವ ಹಂತಕ್ಕೆ ಬಂದಿದೆ. ಪೋಷಕರು ಮಕ್ಕಳನ್ನ ಕನ್ನಡ ಶಾಲೆಗೆ ಹಾಕುತ್ತಿಲ್ಲ ಸಾಲ ಮಾಡಿಯಾದರು ಇಂಗ್ಲಿಷ್ ಶಿಕ್ಷಣ ಬೇಕು ಎಂದು ಕಾನ್ವೆಂಟ್‌ಗೆ ಕಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ನರೇಂದ್ರ ತಳೇಕರ್, ಮಂಜುನಾಥ ಗೌಡ, ನಾಗು ಹಳ್ಳೇರ, ತಿಮ್ಮಪ್ಪ ನಾಯ್ಕ, ಶಶಾಂಕ ಕಡವಾಡಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.