ಕಾರವಾರ: ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಕಳಕಳಿಗಳನ್ನು ರೂಢಿಸಿಕೊಂಡು ಉತ್ತಮ ನಾಗರಿಕರಾಗಲು ಪ್ರಯತ್ನಿಸಬೇಕು ಎಂದು ಕೆನರಾ ವೆಲ್‌ಫೇರ್ ಟ್ರಸ್ಟ್ನ ಟ್ರಸ್ಟಿ ಡಾ.ವಿ. ಎನ್.ನಾಯಕ ಹೇಳಿದರು.
ನಗರದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದಲ್ಲಿ 2022- 23ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದ ಅವರು, ಹಿರಿಯರು ಹಾಗೂ ಗುರುಗಳ ಉಪದೇಶಗಳನ್ನು ಸರಿಯಾಗಿ ಅರ್ಥೈಸಿಕೊಂಡು ತಾವು ಕಲಿತ ವಿದ್ಯಾಲಯಗಳನ್ನು ಪ್ರೀತಿಯಿಂದ ಕಾಣಬೇಕು ಎಂದು ಕಿವಿಮಾತು ಹೇಳಿದರು.
ಕೆನರಾ ವೆಲ್‌ಫೇರ್ ಟ್ರಸ್ಟ್ನ ಇನ್ನೋರ್ವ ಟ್ರಸ್ಟಿ ಡಾ.ಕೃಷ್ಣ ಪ್ರಭು ಮಾತನಾಡಿ, ಈಗಿನ ಯುವಜನತೆ ಮಾನಸಿಕ ಹಾಗೂ ದೈಹಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಬಹುತೇಕ ಜನರಲ್ಲಿ ಮಾನಸಿಕ ಖಿನ್ನತೆ ಎದ್ದು ಕಾಣುತ್ತದೆ. ಇದನ್ನು ಹೊಗಲಾಡಿಸಲು ಯುವ ಜನತೆ ಸರಿಯಾದ ಜೀವನ ಅಭ್ಯಾಸ ರೂಪಿಸಿಕೊಳ್ಳಬೇಕು.ವಿದ್ಯಾರ್ಥಿಗಳು ಪ್ರಕೃತಿ ನೀಡಿದ ಅನೇಕ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಹಾಗೂ ಸಮಾಜದ ಉನ್ನತಿಗಾಗಿ ಶ್ರಮಿಸಬೇಕು ಎಂದರು.
ದಿವೇಕರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಆರ್.ಎಸ್.ಹಬ್ಬು, ವಿದ್ಯಾರ್ಥಿಗಳಗೆ 2022-2023ನೇ ಶೈಕ್ಷಣಿಕ ವರ್ಷದ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. ಪ್ರಾಚಾರ್ಯ ಡಾ.ಕೇಶವ ಕೆ.ಜಿ. ವಾರ್ಷಿಕ ವರದಿ ವಾಚಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ.ಬಿ.ಆರ್.ತೋಳೆ ಕ್ರೀಡಾ ವಿಭಾಗದ ಬಹುಮಾನಯಾದಿ ವಾಚಿಸಿದರು. ಸಾಂಸ್ಕೃತಿಕ ವಿಭಾಗದ ಬಹುಮಾನ ಯಾದಿಯನ್ನು ಸಂಧ್ಯಾ ಕದಂ ವಾಚಿಸಿದರು.
ಬಜಾಜ್ ಫಿನ್‌ಸರ್ವ್ನ ಪ್ರಮಾಣ ಪತ್ರಗಳ ಯಾದಿಯನ್ನು ಎಂ.ಕಾಂ. ವಿಭಾಗದ ಮುಖ್ಯಸ್ಥ ಶುಭಂ ತಳೇಕರ ವಾಚಿಸಿದರು. ವಿದ್ಯಾರ್ಥಿಗಳಾದ ನಕ್ಷಿತಾ ಸಂಗಡಿಗರು ಪ್ರಾರ್ಥಿಸಿದರು. ಬಿ.ಸಿ.ಎ ವಿಭಾಗದ ಮುಖ್ಯಸ್ಥ ಡಾ.ಹರೀಶ ಕಾಮತ ಸ್ವಾಗತಿಸಿದರು. ಎಮ್.ಕಾಂ ವಿಭಾಗದ ಮುಖ್ಯಸ್ಥ ಶುಭಂ ತಳೇಕರ ವಂದಿಸಿದರು. ಉಪನ್ಯಾಸಕಿ ಸ್ನೇಹಲ್ ರೇವಣಕರ ನಿರೂಪಿಸಿದರು. ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕ ಸುಧೀರ್ ಕದಂ, ಗ್ರಂಥಪಾಲಕ ಸುರೇಶ ಗುಡಿಮನಿ ವಿದ್ಯಾರ್ಥಿ ಪ್ರತಿನಿಧಿಗಳಾದ ವೈಭವ ವೆರ್ಣೇಕರ ಹಾಗೂ ರಜತ ಬಾಂದೇಕರ ಇದ್ದರು. ಎಲ್ಲಾ ಉಪನ್ಯಾಸಕ ಹಾಗೂ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.