ಯಲ್ಲಾಪುರ: ಪಟ್ಟಣದ ಕಾಳಮ್ಮನಗರದಲ್ಲಿ ವರ್ಷದ ಹಿಂದೆ ನಿರ್ಮಾಣ ಮಾಡಲಾದ ಶುದ್ಧ ಕುಡಿಯುವ ನೀರಿನ ಘಟಕ ಸರಿಯಾದ ನಿರ್ವಹಣೆ ಇಲ್ಲದೆ ಹಾಳಾಗುವ ಅಂಚಿಗೆ ಬಂದು ತಲುಪಿದ್ದು, ಸಾರ್ವಜನಿಕರು ಕ್ರೀಡಾಪಟುಗಳಿಗೆ ಪ್ರಯೋಜನಕ್ಕೆ ಬಾರದಂತಾಗಿದೆ.
14 ತಿಂಗಳ ಹಿಂದೆ ಕಾಳಮ್ಮನಗರದ ಕಾಳಮ್ಮದೇವಿ ತಾಲೂಕ ಕ್ರೀಡಾಂಗಣದಲ್ಲಿ ಸಾರ್ವಜನಿಕರು ಹಾಗೂ ಕ್ರೀಡಾಪಟುಗಳಿಗಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಹತ್ತಾರು ಲಕ್ಷ ರೂಪಾಯಿ ವೆಚ್ಚ ಮಾಡಿ ನಿರ್ಮಾಣ ಮಾಡಲಾಗಿತ್ತು, ಕಳೆದ ಡಿಸೆಂಬರ್ ಜನವರಿ ತಿಂಗಳಲ್ಲಿ ಸಾರ್ವಜನಿಕರ ಸೇವೆಗೆ ವಿದ್ಯುಕ್ತವಾಗಿ ಉದ್ಘಾಟನೆ ಮಾಡಲಾಯಿತು. ಈ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಕಾಯಿನ್ ಬಾಕ್ಸ್ ಅಳವಡಿಸಿ, ನೀರು ಪಡೆಯುವ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಆದರೆ, ಕಳೆದ ಒಂದುವರೆ ಎರಡು ತಿಂಗಳ ಹಿಂದೆ ಪಟ್ಟಣದ ಯಾವುದೋ ಶುದ್ಧ ಕುಡಿಯುವ ನೀರಿನ ಘಟಕದ ಕಾಯಿನ್ ಬಾಕ್ಸ್ ಹಾಳಾಗಿದೆ ಅನ್ನುವ ಕಾರಣಕ್ಕಾಗಿ, ಕಾಳಮ್ಮನಗರ ಕ್ರೀಡಾಂಗಣದ ಶುದ್ಧ ಕುಡಿಯುವ ನೀರಿನ ಘಟಕದ ಕಾಯಿನ್ ಬಾಕ್ಸ್ ತೆಗೆದುಕೊಂಡು ಹೋಗಿ ಅಲ್ಲಿ ಅಳವಡಿಸಲಾಗಿದೆ. ಹೀಗಾಗಿ ಕಳೆದ ಎರಡು ತಿಂಗಳಿOದ ತಾಲೂಕ ಕ್ರೀಡಾಂಗಣದ ಕುಡಿಯುವ ನೀರಿನ ಘಟಕ ನಿಂತು ಹೋಗಿದೆ.
ಇನ್ನು ಕೆಲವೇ ದಿನಗಳಲ್ಲಿ ಕ್ರೀಡಾಂಗಣದಲ್ಲಿ ಶಾಲಾ, ಕಾಲೇಜು, ದಸರಾ ಮುಂತಾದ ಕ್ರೀಡಾ ಚಟುವಟಿಕೆಗಳು ನಡೆಯಲಿದ್ದು, ಈ ಸಂದರ್ಭದಲ್ಲಿ ಏಕಾಏಕಿ ದುರಸ್ತಿ ಮಾಡುವುದು ಮತ್ತು ಇನ್ನಿತರ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಕ್ರೀಡಾಪಟುಗಳಿಗೆ ನೀರು ಒದಗಿಸುವುದು ಕಷ್ಟವಾಗಲಿದೆ. ಕೂಡಲೇ ಕಿತ್ತುಕೊಂಡು ಹೋಗಿರುವ ಕಾಯಿನ್ ಬಾಕ್ಸ್ ಅನ್ನು ಮರು ಜೋಡಿಸಬೇಕು ಮತ್ತು ಅಗತ್ಯವಿರುವ ಎಲ್ಲ ದುರಸ್ತಿಯನ್ನು ಮಾಡಿ ಬರಲಿರುವ ಕ್ರೀಡಾಕೂಟಗಳಲ್ಲಿ ಶಾಲಾ ಮಕ್ಕಳಿಗೆ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಕಾಳಮ್ಮನಗರದ ನವೀನ ಗುಣವಂತ ನಾಯ್ಕ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಗಮನಹರಿಸಬೇಕಾಗಿದ್ದು, ಯಾವ ಉದ್ದೇಶಕ್ಕೆ ಘಟಕ ನಿರ್ಮಾಣ ಮಾಡಲಾಗಿದೆ ಆ ಉದ್ದೇಶವನ್ನು ಈಡೇರಿಸುವಂತಹ ಆಗಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.