Slide
Slide
Slide
previous arrow
next arrow

ಸಾಲ್ಕೋಡ್ ಗ್ರಾಮಸಭೆ: ಗ್ರಾಮದ ಸಮಸ್ಯೆಗಳ ಚರ್ಚೆ, ಪರಿಹಾರಕ್ಕೆ ಆಗ್ರಹ

300x250 AD

ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾ.ಪಂ.ಸಭಾಭವನದಲ್ಲಿ ಗ್ರಾಮದ ವಿವಿಧ ಸಮಸ್ಯೆಯ ಕುರಿತಾಗಿ ಮೂರು ಗಂಟೆಗೂ ಅಧಿಕ ಕಾಲ ಗ್ರಾಮ ಸಭೆಯಲ್ಲಿ ಚರ್ಚಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಗ್ರಾಮಸಭೆಯಲ್ಲಿ ಶಿಕ್ಷಣ,ಆರೋಗ್ಯ, ಅರಣ್ಯ, ಹೆಸ್ಕಾಂ, ಕುಡಿಯುವ ನೀರು ವಿಭಾಗ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಗ್ರಾಮದ ವಿವಿಧ ಶಾಲಾ ಕಟ್ಟಡಗಳು ಸೋರುತ್ತಿದೆ. ಶಿಕ್ಷಕರ ಕೊರತೆ ಇದೆ, ಅಕ್ಷರದಾಸೋಹ ಮತ್ತು ಶೌಚಾಲಯ ಸಮಸ್ಯೆಯ ಬಗ್ಗೆ ಚರ್ಚೆ ನಡೆದು ಇಲಾಖೆಯಿಂದ ಅನುದಾನ ಬಿಡುಗಡೆಯಾದಲ್ಲಿ ಸಮಸ್ಯೆ ಬಗೆಹರಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದರು. ಗ್ರಾಮದ ಅರೇಅಂಗಡಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬೇಸಿಗೆಯಲ್ಲಿ ಕಾಡುತ್ತದೆ. ಇದೀಗ ಜಲಜೀವನ ಮಿಷನ್ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಈ ಬಗ್ಗೆ ಮಾಹಿತಿ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿ ಪ್ರಶ್ನೆಗಳ ಸುರಿಮಳೆಗೈದರು. ಈ ಯೋಜನೆಯ ಜಾರಿಯ ಬಳಿಕ ನೀರಿನ ಶುಲ್ಕ ಹೆಚ್ಚಳದ ಆತಂಕ ವ್ಯಕ್ತಪಡಿಸಿದಾಗ, ಜುಲೈ 14ರ ಮುಂಜಾನೆ 11 ಗಂಟೆಗೆ ಅಧಿಕಾರಿಗಳಿಂದ ಮಾಹಿತಿ ನೀಡುವ ಭರವಸೆಯನ್ನು ಗ್ರಾ.ಪಂ.ಅಧ್ಯಕ್ಷರು ನೀಡಿದರು.

ಸಾಲ್ಕೋಡ್ ಹೊಳೆಗೆ ಸೇತುವೆ ಪೂರ್ಣಗೊಂಡಿಲ್ಲ. ಮಳೆಗಾಲ ಆರಂಭವಾದರೂ ಇದುವರೆಗೂ ಕಾಲುಸಂಕ ಅಳವಡಿಸದೇ ಇರುದರಿಂದ ಸಂಚಾರಕ್ಕೆ ಸಮಸ್ಯೆ ಆಗಿದೆ. ಈ ಹೊಳೆಯಲ್ಲಿ ಬೃಹತ್ ಮರ ಬಿದ್ದು, ನೀರು ಸುಗಮವಾಗಿ ಹೋಗಲು ಸಮಸ್ಯೆ ಆಗಿ, ತಗ್ಗುಪ್ರದೇಶಕ್ಕೆ ನೀರು ನುಗ್ಗಿ ಸಮಸ್ಯೆ ಆಗುತ್ತಿದೆ ಎಂದು ಸ್ಥಳಿಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ಈ ಎರಡು ಸಮಸ್ಯೆಯನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬಗೆಹರಿಸುವಂತೆ ನಿರ್ಧರಿಸಲಾಯಿತು.

300x250 AD

ಗ್ರಾಮದಲ್ಲಿ ಕಾಡುಪ್ರಾಣಿ ಹಾವಳಿ ನಿಯಂತ್ರಣದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಇದೆ ವೇಳೆ ರಸ್ತೆ ಅಂಚಿನಲ್ಲಿ ಮರಗಳು ಅಪಾಯಕಾರಿ ಹಂತದಲ್ಲಿದ್ದು, ಅದನ್ನು ಕಟಾವು ಮಾಡಬೇಕು. ಹೆಸ್ಕಾಂ ಲೈನ್ ಹೋದ ಸ್ಥಳದಲ್ಲಿ ಗಿಡ ಮರಗಳಿಂದ ಆಗಾಗ ವಿದ್ಯುತ್ ವ್ಯತ್ಯಯವಾಗುದನ್ನು ತಪ್ಪಿಸಲು ನೆರವಾಗುವಂತೆ ಮನವಿ ಮಾಡಿದರು. ಅರೇಅಂಗಡಿ ತೊಳಸಾಣಿ ರಸ್ತೆ ಪಕ್ಕದಲ್ಲಿ ಹಿಂಡು ಬೆಳೆದು ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ಸಮಸ್ಯೆಯನ್ನು ವಿವರಿಸಿದರು. ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿ ಅಧಿಕಾರಿಗಳು ಪರಿಹರಿಸಿದರು. ಇಲಾಖೆಯ ಅನುದಾನದ ಮೂಲಕ ಹಂತಹಂತವಾಗಿ ಸಮಸ್ಯೆ ಬಗೆಹರಿಸುವ ಭರವಸೆ ಅಧಿಕಾರಿಗಳು ನೀಡಿದರು.

ಗ್ರಾ.ಪಂ.ಅಧ್ಯಕ್ಷೆ ರಜನಿ ನಾಯ್ಕ, ಉಪಾಧ್ಯಕ್ಷ ಸಚೀನ ನಾಯ್ಕ, ನೊಡೇಲ್ ಅಧಿಕಾರಿ ಪುನೀತಾ, ಗ್ರಾ.ಪಂ.ಸದಸ್ಯರು, ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

Share This
300x250 AD
300x250 AD
300x250 AD
Back to top