ದಾಂಡೇಲಿ: ನಗರದ ಅಂಬೇವಾಡಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ದಶಮಾನೋತ್ಸವದ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಬುಧವಾರ ನಡೆಯಿತು.
ಕಾಲೇಜಿನ ಯುವ ರೆಡ್‌ಕ್ರಾಸ್, ಎನ್.ಸಿ.ಸಿ, ಎನ್.ಎಸ್.ಎಸ್, ಸ್ಕೌಟ್ಸ್ & ಗೈಡ್ಸ್ ಘಟಕ, ಶ್ರೀವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಕೆನರಾ ಬ್ಯಾಂಕ್ ದೇಶಪಾಂಡೆ ರ‍್ಸೆಟಿ ಸಂಸ್ಥೆ, ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ, ಹುಬ್ಬಳಿ ರಕ್ತ ಭಂಡಾರ ಕೇಂದ್ರ, ದಾಂಡೇಲಿ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿಬಿರಕ್ಕೆ ಶ್ರೀ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟಿನ ಆಡಳಿತಾಧಿಕಾರಿ ಪ್ರಕಾಶ್ ಪ್ರಭು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಇನ್ನೊಂದು ಜೀವವನ್ನು ಉಳಿಸಲು ನೆರವಾಗುವ ರಕ್ತದಾನ ಸರ್ವಶ್ರೇಷ್ಠವಾದ ದಾನವಾಗಿದ್ದು, ಬದುಕಿನಲ್ಲಿ ನಾವು ಮಾಡುವ ದಾನಗಳಲ್ಲಿ ರಕ್ತದಾನ ಅತ್ಯಂತ ಪುಣ್ಯಕಾರ್ಯವಾಗಿದೆ. ರಕ್ತದಾನದ ಬಗ್ಗೆ ಈಗೀಗ ಜಾಗೃತಿ ಮೂಡಿದೆ. ಅದರಲ್ಲಿಯೂ ವಿಶೇಷವಾಗಿ ಮಹಿಳೆಯರು ರಕ್ತದಾನ ಮಾಡಲು ಮುಂದೆ ಬರುತ್ತಿರುವುದು ಸಂತಸದ ಸಂಗತಿ. ರಕ್ತದಾನ ಮಾಡಲು ಆಸ್ತಿ, ಅಂತಸ್ತು, ಐಶ್ವರ್ಯ ಬೇಕಾಗಿಲ್ಲ. ಸಮೃದ್ಧ ಆರೋಗ್ಯ ಮತ್ತು ಮನಸ್ಸೊಂದಿದ್ದರೆ ಸಾಕು. ನಾವು ಬದುಕುವುದರ ಜೊತೆಗೆ ಇನ್ನೊಬ್ಬರ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ರಕ್ತದಾನ ಮಹತ್ವದ ಪಾತ್ರವನ್ನು ವಹಿಸುತ್ತದೆ. ಕಾಲೇಜಿನ ದಶಮಾನೋತ್ಸವ ವರ್ಷಾಚರಣೆಯ ಸಂದರ್ಭದಲ್ಲಿ ಜೀವಕ್ಕಾಗಿ ಜೀವ ಮಿಡಿಯುವಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದು ಔಚಿತ್ಯಪೂರ್ಣವಾಗಿದೆ ಎಂದರು.
ಕರ್ನಾಟಕ ಕಾನ್ಸರ್ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯ ರಕ್ತ ಭಂಡಾರ ಕೇಂದ್ರದ ವೈದ್ಯಾಧಿಕಾರಿ ಡಾ.ಉಮೇಶ ಹಳ್ಳಿಕೇರಿ ಮತ್ತು ಕಾಲೇಜಿನ ಹಿರಿಯ ಪ್ರಾಧ್ಯಾಪಕ ಡಾ.ಬಿ.ಎನ್.ಅಕ್ಕಿ ಅವರು ರಕ್ತದಾನದ ಅವಶ್ಯಕತೆ ಮತ್ತು ಉದ್ದೇಶವನ್ನು ವಿವರಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಡಿ.ಒಕ್ಕುಂದ, ಸಮಾಜ ಕೊಟ್ಟಿರುವ ಅಪರಿಮಿತವಾದ ಋಣವನ್ನು ತೀರಿಸಲು ರಕ್ತದಾನ ಪ್ರಮುಖವಾದ ವೇದಿಕೆಯಾಗಿದೆ. ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ಈ ಶಿಬಿರವನ್ನು ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಆಯುಷ್ ಆಸ್ಪತ್ರೆಯ ವೈದ್ಯ ಡಾ.ದೀಪಕ್ ಮಹಾಲೆ, ಕೆನರಾ ಬ್ಯಾಂಕ್ ದೇಶಪಾಂಡೆ ರ‍್ಸೆಟಿ ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ ಚೌವ್ಹಾಣ್ ಮೊದಲಾದವರು ಉಪಸ್ಥಿತರಿದ್ದರು. ಕಾವ್ಯಾ ಭಟ್ ಅವರು ಸ್ವಾಗತಿಸಿದ ಕಾರ್ಯಕ್ರಮಕ್ಕೆ ಪ್ರಾಧ್ಯಾಪಕ ಡಾ.ಎನ್.ಎಂ.ಜಂಗೂಬಾಯಿ ಸ್ವಾಗತಿಸಿದರು. ತಸ್ಲೀಮಾ ಜೋರುಂ ಅತಿಥಿಗಳನ್ನು ಪರಿಚಯಿಸಿದರು. ಎಸ್.ಎಂ.ಜೋಗ್ ವಂದಿಸಿದರು. ಡಾ.ಮಂಜುನಾಥ್ ಚಲವಾದಿಯವರು ಕರ‍್ಯಕ್ರಮವನ್ನು ನಿರೂಪಿಸಿದರು. ಶಿಬಿರದಲ್ಲಿ 50 ಜನ ರಕ್ತದಾನಿಗಳು ರಕ್ತದಾನವನ್ನು ಮಾಡಿದರು.