ಶಿರಸಿ: ಪರಿಸರ ಮತ್ತು ವಾಯುಗುಣವನ್ನು ಮಾನವ ತನ್ನ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳುತ್ತಿರುವುದು ಪ್ರಕೃತಿಯ ಮೇಲೆ ಹಾನಿಯಾಗುತ್ತಿದೆ. ಮಾನವನ ಈ ಕೆಲಸದಿಂದ ಪ್ರಕೃತಿಯ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಭೂಮಿಯ ಮೇಲಿನ ಎಲ್ಲ ಜೀವಿಗಳು ಅನುಭವಿಸುವಂತೆ ಆಗಿದೆ ಎಂದು ನಿವೃತ್ತ ಪ್ರೊಫೆಸರ್ ಆರ್.ವಿ.ಭಾಗವತ್ ಹೇಳಿದರು.
ಅವರು ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಹಾಗೂ ಭೂಗೋಳಶಾಸ್ತ್ರ ವಿಭಾಗದ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಚರ್ಚಾ ಸ್ಪರ್ಧೆ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.
ಕೇವಲ ಹವಾಮಾನ ಮಾತ್ರವಲ್ಲ ನಮ್ಮ ಜೀವನದ ಬಗ್ಗೆಯೂ ಅರಿವಿರಬೇಕು. ಪ್ರಕೃತಿಯಲ್ಲಿನ ಆಗುಹೋಗುಗಳಿಗೆ ನಾವೇ ಜವಾಬ್ದಾರರು. ನಗರೀಕರಣ ಮಾಡುವ ಉದ್ದೇಶದಿಂದ ಪ್ರಕೃತಿ ನಾಶ ಮಾಡುವುದನ್ನು ನಿಲ್ಲಿಸಿ ಹೆಚ್ಚು ಗಿಡಮರಗಳನ್ನು ಬೆಳೆಸಿ ಶುದ್ಧವಾದ ಗಾಳಿ ನೀರನ್ನು ಪಡೆಯೋಣ ಎಂದು ಹೇಳಿದರು.
ಎಲ್ಲರೂ ನಗರಕ್ಕೆ ಬರಲು ಬಯಸುತ್ತಾರೆ. ನಗರದ ಜೀವನವನ್ನು ಹಾಗೂ ನಗರದ ಎಲ್ಲಾ ಸೌಲಭ್ಯಗಳನ್ನು ಅನುಭವಿಸಲು ಬಯಸುತ್ತಾರೆ. ನಗರೀಕರಣ ಬೇಕೆಂದರೆ ಅದರ ಮುಂದಿನ ಪರಿಣಾಮವನ್ನು ಎದುರಿಸಲು ಸಿದ್ಧರಿರಬೇಕು. ಆದರೆ ಹಳ್ಳಿಗಳಲ್ಲಿನ ಸೊಗಸಾದ ಪರಿಸರವನ್ನು ಮರೆಮಾಡಿಕೊಳ್ಳುತ್ತಿದ್ದೇವೆ. 2050ರ ವೇಳೆಗೆ ಹಳ್ಳಿಗಳೆ ಕಾಣಲು ಸಿಗುವುದಿಲ್ಲ. ಮುಂದಿನ ಪರಿಣಾಮವನ್ನು ಎದುರಿಸುವ ಮೊದಲೇ ನಾವು ಏನು ಮಾಡುತ್ತಿದ್ದೇವೆ? ಪ್ರಕೃತಿಗೆ ನಮ್ಮ ಕೊಡುಗೆ ಏನು ಎಂಬುದರ ಬಗ್ಗೆ ಅರಿವಿರಬೇಕೆಂದು ಕಾಲೇಜಿನ ನಿವೃತ್ತ ಪ್ರಾಚಾರ್ಯೆ ಡಾ. ಕೋಮಲ ಭಟ್ ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ಎಸ್. ಹಳೆಮನೆ ಸ್ವಾಗತಿಸಿದರು. ಭೂಗೋಳ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಚಿನ್ಮಯಿ ಹೆಗಡೆ ವಂದಿಸಿದರು.ಎಂ. ಇ.ಎಸ್ ವಾಣಿಜ್ಯ ಮಹಾವಿದ್ಯಾಲಯ ಶಿರಸಿಯ ಮನೋಜ್ ಭಟ್ ಪ್ರಥಮ ಸ್ಥಾನ, ತೋಟಗಾರಿಕಾ ಕಾಲೇಜು ಶಿರಸಿಯ ಐಶ್ವರ್ಯ ಎ.ಬಿ ದ್ವಿತೀಯ ಸ್ಥಾನ,ಎಂ. ಇ.ಎಸ್ ಕಾನೂನು ಮಹಾವಿದ್ಯಾಲಯ ಶಿರಸಿಯ ರೋಹಿತ್ ಎಂ. ಆರ್ ತೃತೀಯ ಸ್ಥಾನ ಪಡೆದರು.