ಕಾರವಾರ: ಕಳೆದ ಒಂದು ವಾರದಿಂದ ಕರಾವಳಿಯಾದ್ಯಂತ ಅಬ್ಬರಿಸಿದ್ದ ಮಳೆ ಕಳೆದ ಮೂರು ದಿನಗಳಿಂದ ಕಡಿಮೆಯಾಗಿದ್ದು, ಇದರಿಂದ ಪ್ರಕ್ಷುಬ್ಧಗೊಂಡಿದ್ದ ಕಡಲು ಕೂಡ ಸ್ವಲ್ಪ ಶಾಂತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಪರಿಸ್ಥಿತಿ ನೋಡಿಕೊಂಡು ಸಾಂಪ್ರದಾಯಿಕ ನಾಡದೋಣಿಯನ್ನು ಸಮುದ್ರಕ್ಕೆ ಇಳಿಸಲು ಸಜ್ಜಾಗಿದ್ದಾರೆ.
ಒಂದು ವಾರದ ನಿರಂತರ ಮಳೆಯಿಂದಾಗಿ ಇನ್ನೂ ಸಹ ಮೀನುಗಾರರು ಕಡಲಿಗಿಳಿಯಲು ಸೂಕ್ತ ವಾತಾವರಣವಿಲ್ಲ. ಕಳೆದೆರಡು ದಿನಗಳಿಂದ ಮಳೆ ಕಡಿಮೆಯಾಗಿದ್ದರಿಂದ ಒಂದೆರಡು ದಿನಗಳಲ್ಲಿ ಸಮುದ್ರದ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ತಣ್ಣಗೆ ಆಗುವ ಸಾಧ್ಯತೆಗಳಿದ್ದು, ಆ ಬಳಿಕ ಮೀನುಗಾರರು ಮತ್ಸ್ಯ ಬೇಟೆಗೆ ಇಳಿಯಲಿದ್ದಾರೆ. ಈಗ ಒಂದಷ್ಟು ದಿನ ಮಳೆ ಬಿಡುವು ನೀಡಿದ್ದು, ಜು.18ರ ಅನಂತರ ಮತ್ತೊಂದು ತೂಫಾನ್ ಆಗುವ ಮುನ್ಸೂಚನೆಯಿದೆ. ಹಾಗಾಗಿ ಈಗ 4-5 ದಿನ ಮೀನುಗಾರಿಕೆ ನಡೆಸುವ ಯೋಜನೆ ಕೆಲ ಮೀನುಗಾರರದ್ದಾಗಿದ್ದರೆ, ಇನ್ನು ಕೆಲವರು ಮತ್ತೊಂದು ತೂಫಾನ್ ಆದ ಬಳಿಕವೇ ಕಡಲಿಗಿಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.