ಶಿರಸಿ: ಫೆಬ್ರವರಿ-2023 ಈ ಒಂದು ತಿಂಗಳಿನ ರೂ.5 ಪ್ರೋತ್ಸಾಹಧನ ರಾಜ್ಯ ಸರ್ಕಾರದಿಂದ ಆಧಾರ ಜೋಡಣೆಯಾದ ಜಿಲ್ಲೆಯ ಹಾಲು ಉತ್ಪಾದಕ ರೈತರ ಬ್ಯಾಂಕ್ ಖಾತೆಗೆ ದಿನಾಂಕ ಜು.10, ಸೋಮವಾರದಂದು ಜಮಾ ಆಗಿದೆ ಎಂದು ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನಿರ್ದೇಶಕರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ತಿಳಿಸಿದರು.
ಈ ಸಂದರ್ಭದಲ್ಲಿ ಹೇಳಿಕೆ ನೀಡಿದ ಅವರು 2022-2023 ನೇ ಸಾಲಿನ ಅಕ್ಟೋಬರ್,ನವೆಂಬರ್,ಡಿಸೆಂಬರ್,ಜನವರಿ ಹಾಗೂ ಫೆಬ್ರವರಿ-2023 ನೇ ಮಾಹೆಯ ನಂತರದ ಮಾರ್ಚ್,ಏಪ್ರಿಲ್,ಮೇ-2023 ನೇ ಮಾಹೆಯ ವರೆಗಿನ ರೂ.5 ಪ್ರೋತ್ಸಾಹಧನ ಬಾಕಿ ಇರುವಂತೆಯೇ ಕೇವಲ ಫೆಬ್ರವರಿ-2023 ರ ಒಂದು ತಿಂಗಳ ರೂ.5 ಪ್ರೋತ್ಸಾಹಧನ ಹಾಲು ಉತ್ಪಾದಕ ರೈತರ ಖಾತೆಗೆ ಜಮಾ ಆಗಿರುವುದು ಹಾಲು ಉತ್ಪಾದಕ ರೈತರಲ್ಲಿ ಗೊಂದಲಕ್ಕೀಡುಮಾಡಿದೆ. ಮಧ್ಯಂತರದ ಈ ಒಂದು ತಿಂಗಳಿನ ರೂ.5 ಪ್ರೋತ್ಸಾಹಧನ ಜಮಾ ಆಗಿರುವುದರಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಲೆಕ್ಕ ಪತ್ರಗಳನ್ನು ದಾಖಲಿಸಲು ಕಷ್ಟ ಸಾಧ್ಯವಾಗಿದೆ. ಆದ್ದರಿಂದ ಕೂಡಲೇ ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನವಹಿಸಿ ರಾಜ್ಯ ಸರ್ಕಾರದಿಂದ ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಬರಬೇಕಾಗಿರುವ ಅಕ್ಟೋಬರ್,ನವೆಂಬರ್, ಡಿಸೆಂಬರ್, ಜನವರಿ ಮಾಹೆಗಳ ರೂ.5 ಪ್ರೋತ್ಸಾಹ ಧನವನ್ನು ಅತೀ ಶೀಘ್ರದಲ್ಲಿ ಹಾಲು ಉತ್ಪಾದಕರ ರೈತರ ಖಾತೆಗೆ ಜಮಾ ಮಾಡುವಂತೆ ಸೂಕ್ತ ಕ್ರಮ ವಹಿಸಬೇಕೆಂದು ಈ ಮೂಲಕ ಅವರು ಕೋರಿದರು.
ಜೂನ್-2023 ನೇ ಮಾಹೆಯ ಪ್ರೋತ್ಸಾಹಧನದ ಮಾಹಿತಿಯನ್ನು ನಮ್ಮಿಂದ ಕ್ಷೀರಸಿರಿ ತಂತ್ರಾಶದಲ್ಲಿ ಈಗಾಗಲೇ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದ್ದು, ಫೆಬ್ರವರಿ-2023 ನೇ ಮಾಹೆಯ ರೂ. 5 ಪ್ರೋತ್ಸಾಹಧನ ಜಮಾ ಆಗದ ಹಾಲು ಉತ್ಪಾದಕ ರೈತರು ಕೂಡಲೇ ಆಯಾ ವ್ಯಾಪ್ತಿಯ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಿದರು.