ಶಿರಸಿ: ಇಲ್ಲಿನ ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್.ಸಿ.ಸಿ., ಎನ್ಎಸ್ಎಸ್, ರೆಡ್ ಕ್ರಾಸ್, ಸ್ಕೌಟ್ಸ್ ಗೈಡ್ಸ್ ವಿಭಾಗಗಳ ಅಡಿಯಲ್ಲಿ ಐಕ್ಯೂಎಸಿ ಸಂಯೋಜನೆಯಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜು ಉಪಸಮಿತಿ ಅಧ್ಯಕ್ಷ ಎಸ್.ಕೆ.ಭಾಗವತ್ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿ ಪ್ರತಿ ವರ್ಷ ಮಳೆಗಾಲದಲ್ಲಿ ಎಲ್ಲೆಡೆ ವನಮಹೋತ್ಸವವನ್ನು ಆಚರಿಸುತ್ತಾರೆ. ತದನಂತರ ನೆಟ್ಟ ಸಸಿಯ ಆರೈಕೆಯನ್ನು ಮಾಡದೆ ಸಸಿಗಳು ಸತ್ತು ಹೋಗುವುದೇ ಹೆಚ್ಚು. ವಿದ್ಯಾರ್ಥಿಗಳಾದ ನೀವು ನೆಟ್ಟ ಗಿಡಗಳನ್ನು ಪರೀಕ್ಷಿಸಿ ಅದು ಬದುಕಿ ದೊಡ್ಡ ಮರವಾಗುವಂತೆ ನೋಡಿಕೊಳ್ಳಬೇಕು. ಸಸಿ ನೆಡುವುದು ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಬಾರದು. ಹಸಿರಿದ್ದರೆ ಉಸಿರು ಹಾಗಾಗಿ ಪರಿಸರವನ್ನ ರಕ್ಷಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಪರಿಸರ ನಾಶವಾದರೆ ಇಡೀ ಜಗತ್ತಿಗೆ ಅದರ ಪರಿಣಾಮ ಬೀರುತ್ತದೆ ಎಂದು ಪರಿಸರ ವಿಜ್ಞಾನಿಗಳು ಕಂಡುಕೊಂಡಿದ್ದಾರೆ, ಹಾಗಾಗಿ ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ನಾವು ಸಂರಕ್ಷಣೆಯಲ್ಲಿ ದೊಡ್ಡದಾದ ಜವಾಬ್ದಾರಿಯನ್ನು ಹೊಂದಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್. ಹಳೆಮನೆ, ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟರು.