ಶಿರಸಿ: ಇಂದು ಇಡೀ ವಿಶ್ವವೇ ಭಾರತದತ್ತ ಮುಖ ಮಾಡಿದೆ. ಉದ್ಯಮ ಪ್ರಾರಂಭಿಸಲು ಉತ್ತಮ ಅವಕಾಶ ಇಂದು ನಿರ್ಮಾಣವಾಗಿದೆ. ಅಮೆರಿಕದಂತ ರಾಷ್ಟ್ರವೇ ಭಾರತದತ್ತ ಮುಖ ಮಾಡಿರುವಾಗ ವಿದ್ಯಾರ್ಥಿಗಳು ಕೌಶಲ್ಯಭರಿತರಾಗಿ ಹೊಸ ಕ್ರಾಂತಿಯನ್ನು ಮಾಡಲು ಸನ್ನದ್ಧರಾಗಬೇಕು ಎಂದು ಉದ್ಯಮಿ ರಾಮ್ ಕಿಣಿ ಹೇಳಿದರು.
ಅವರು ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಭೌತಶಾಸ್ತ್ರ, ವಿಭಾಗ ಕರಿಯರ್ ಗೈಡೆನ್ಸ್ ವಿಭಾಗ, ಪ್ಲೇಸ್ಮೆಂಟ್ ಸೆಲ್ ವಿಭಾಗದ ಸಹಯೋಗದಲ್ಲಿ ಐಕ್ಯೂಎಸಿ ಸಂಯೋಜನೆಯಲ್ಲಿ ಆಯೋಜಿಸಿದ್ದ ಉದ್ಯೋಗ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದ ಡಾಕ್ಟರ್’ಗಳು, ಎಂಜಿನಿಯರ್’ಗಳು ಬೇರೆ ದೇಶಗಳಿಗೆ ಉದ್ಯೋಗಕ್ಕಾಗಿ ಹೋಗುತ್ತಿದ್ದಾರೆ. ನಮ್ಮ ದೇಶದಲ್ಲಿ ಇಂದು ಉದ್ಯೋಗಕ್ಕೆ ಹೆಚ್ಚಿನ ಅವಕಾಶಗಳಿದ್ದು, ಭಾರತದ ಜಿಡಿಪಿಯು ಹೆಚ್ಚುತ್ತಿದೆ. ಹಿಂದೆ ವಿದೇಶಿ ವಸಾಹತುಶಾಹಿಗಳು ನಮ್ಮ ದೇಶ ಸಂಪತ್ತನ್ನ ಲೂಟಿ ಮಾಡಿದರು. ಸ್ವಾತಂತ್ರ್ಯ ಬಂದ ನಂತರ ಇಂದು ನಾವು ಅನೇಕ ಔದ್ಯೋಗಿಕ ಕ್ಷೇತ್ರಗಳಲ್ಲಿ ಮಾದರಿಯಾಗಿದ್ದೇವೆ. ಹಾಲು ಉತ್ಪಾದನೆಯಲ್ಲಿ ವಿಶ್ವಕ್ಕೆ ಮಾದರಿಯಾಗಿದ್ದೇವೆ. ಸ್ವಉದ್ಯೋಗವನ್ನು ಮಾಡುವ ನಿಟ್ಟಿನಲ್ಲಿ ಯುವ ಜನತೆ ತೊಡಗಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಟಿ.ಎಸ್.ಹಳೆಮನೆ ಮಾತನಾಡಿ ಸರ್ಕಾರಿ ಉದ್ಯೋಗಕ್ಕಾಗಿ ವಿದ್ಯಾರ್ಥಿಗಳು ಕಾಯದೆ ಸ್ವ ಉದ್ಯೋಗದತ್ತ ಮುಖ ಮಾಡಬೇಕಿದೆ. ಸರ್ಕಾರದಿಂದ ಸ್ವ ಉದ್ಯೋಗಕ್ಕಾಗಿ ಇರುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾಲೇಜು ಉಪಸಮಿತಿ ಅಧ್ಯಕ್ಷ ಎಸ್.ಕೆ.ಭಾಗವತ್ ಉಪಸ್ಥಿತರಿದ್ದರು. ಐಕ್ಯೂಎಸಿ ಸಂಚಾಲಕ ಡಾ.ಎಸ್.ಎಸ್. ಭಟ್ ಸ್ವಾಗತಿಸಿದರು. ಡಾ. ಗಣೇಶ್ ಹೆಗಡೆ ಪರಿಚಯಿಸಿದರು. ಪ್ರೊ.ಕೆ.ಎನ್. ರೆಡ್ಡಿ ವಂದಿಸಿದರು .ಪ್ರೊ. ರವಿ ಕೊಳೇಕರ್ ನಿರೂಪಿಸಿದರು.