ಶಿರಸಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಯಾವುದೇ ಕೊಡುಗೆ ಸಿಗದೆ ಇರುವುದಕ್ಕೆ ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ ಬೇಸರ ವ್ಯಕ್ತಪಡಿಸಿದರು.
ಉತ್ತರ ಕನ್ನಡ ಜಿಲ್ಲೆಯ ದಶಕಗಳ ಬೇಡಿಕೆಯಾಗಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕನಸು ಕೊನೆಗೂ ಈಡೇರಿಲ್ಲ. ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಕೊನೇ ಬಜೆಟ್‌ನಲ್ಲಿ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ಈ ಬಾರಿ ಸಿಎಂ ಸಿದ್ದರಾಮಯ್ಯಮಂಡಿಸಿದ ಬಜೆಟ್‌ನಲ್ಲಿ ಅದರ ಪ್ರಸ್ತಾಪವೇ ಇಲ್ಲ. ಈ ಮೂಲಕ ದಶಕದ ಯೋಜನೆ ಮರೀಚಿಕೆಯಾಗಿಯೇ ಉಳಿದಿದೆ. ಉತ್ತರ ಕನ್ನಡ ಜಿಲ್ಲೆಗೆ ಸಂಪೂರ್ಣವಾಗಿ ಈ ಬಜೆಟ್’ನಿಂದ ಅನ್ಯಾಯವಾಗಿದೆ. ಶಿರಸಿ ಜಿಲ್ಲೆಯಾಗಿ ಘೋಷಣೆ ಆಗುವಂತಹ ನಿರೀಕ್ಷೆ ಇತ್ತು, ಆದರೆ ಅದು ಕೂಡ ಆಗಿಲ್ಲ. ರಾಜ್ಯದ ಮೊದಲ ಪರಿಸರ ವಿಶ್ವವಿದ್ಯಾಲಯ ಶಿರಸಿಯಲ್ಲಿ ಸ್ಥಾಪಿಸಲಾಗುವುದು ಎಂದು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಿದ್ದ ಘೋಷಣೆಗೆ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ಮುದ್ರೆ ಒತ್ತಲಿಲ್ಲ. ಕೂಡಲೇ ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕರು ಉತ್ತರ ಕನ್ನಡ ಜಿಲ್ಲೆಯ ಬೇಡಿಕೆಗಳನ್ನು ಹಾಗೂ ಶಿರಸಿ ಜಿಲ್ಲೆಯನ್ನಾಗಿ ಮಾಡುವ ಕುರಿತು ಸರ್ಕಾರದ ಗಮನಕ್ಕೆ ತಂದು ಶಿರಸಿ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಉಪೇಂದ್ರ ಪೈ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.