ಶಿರಸಿ: ಕಡವೆ ಶ್ರೀಪಾದ ಹೆಗಡೆಯವರ ಸಹಕಾರಿ ತತ್ವ-ಮೌಲ್ಯಾಧಾರಿತ ಆದರ್ಶಗಳನ್ನು ಪ್ರತೀ ಮನೆ ಮನೆಗೂ ತಲುಪುವಂತೆ ಮಾಡಿ ಇಂದಿನ ಹಾಗು ಮುಂದಿನ ತಲೆಮಾರಿಗೆ ಪ್ರೇರಣೆ ನೀಡುವುದು ನಮ್ಮೆಲ್ಲರ ಆದ್ಯತೆಯಾಗಿದೆ ಎಂದು ಟಿಎಸ್ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಹೇಳಿದರು.
ಅವರು ತಾಲೂಕಿನ ಮಂಜುಗುಣಿಯ ಶ್ರೀದೇವಾಲಯದ ಸಭಾಂಗಣದಲ್ಲಿ ಸೋಮವಾರ ನಡೆದ ದಿ. ಶ್ರೀಪಾದ ಹೆಗಡೆ ಕಡವೆ ಇವರ ಜನ್ಮಶತಾಬ್ದಿ 2024 ವರ್ಷಾಚರಣೆಯ ಪೂರ್ವಭಾವಿ ಅಂಗವಾಗಿ ತೋಟಗಾರರ ಸ್ವಯಂ-ಸಹಕಾರಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯ ಸಹಕಾರಿ ಎಸ್ ಕೆ ಭಾಗ್ವತ್ ಮಾತನಾಡಿ ಮನೆ ಮನೆಯನ್ನು ಸಂಪರ್ಕಿಸಿ ಕಡವೆ ಹೆಗಡೆಯವರ ಆದರ್ಶಗಳನ್ನು ಅವರು ತೋರಿದ ದಾರಿಯ ಬಗ್ಗೆ ಚಿಂತಿಸಿದಾಗ ಸಹಕಾರಿ ವ್ಯವಸ್ಥೆ ಉತ್ತಮವಾಗುತ್ತದೆ. ಸಹಕಾರ ವ್ಯವಸ್ಥೆಗೆ ಕಡವೆಯವರು ನೀಡಿದ ಕೊಡುಗೆ ಅಪಾರ. ರೈತರು ಯಾವುದೇ ಕಷ್ಟದಲ್ಲಿ ಇದ್ದಾಗ ರೈತರನ್ನು ಎತ್ತಿ ಹಿಡಿದ ಕಡವೆ ಹೆಗಡೆಯವರ ಚಿಂತನೆಗಳು ಪ್ರತಿ ಯುವಜನರ ಮನ ಮುಟ್ಟಿ ಅವರು ಹಾಕಿ ಕೊಟ್ಟ ದಾರಿಯಲ್ಲಿ ಯುವಜನತೆ ಸಾಗಬೇಕು. ಯುವ ಜನಾಂಗ ಸಹಕಾರ ವ್ಯವಸ್ಥೆಗೆ ಬರುವಂತಾಗಬೇಕು. ಕಡವೆಯವರ ಜನ್ಮ ಶತಾಬ್ದಿ ವರ್ಷ ಸಹಕಾರ ವರ್ಷವಾಗಲಿ ಎಂದು ಹೇಳಿದರು.
ಟಿಎಸ್ಎಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ರವೀಶ್ ಹೆಗಡೆ ಮಾತನಾಡಿ ವ್ಯಕ್ತಿಯ ಕಾಲಾನಂತರದಲ್ಲಿ ಕೂಡಾ ಜನರು ವ್ಯಕ್ತಿಯನ್ನು ನೆನಪಿಸಿಕೊಳ್ಳುವುದು ಅವರ ಕೆಲಸದಿಂದ ಮಾತ್ರ. ಅಂತಹ ವ್ಯಕ್ತಿಗಳಲ್ಲಿ ಕಡವೆ ಹೆಗಡೆ ಒಬ್ಬರು. ಅವರ ಮಾರ್ಗದಲ್ಲಿಯೇ ನಡೆದು ಬಂದ ಸಂಸ್ಥೆ ಬದ್ಧತೆಯಿಂದ ರೈತರಿಗೆ ಅನುಕೂಲ ಮಾಡಿಕೊಡುತ್ತಾ ಬಂದಿದೆ. ಇಂದಿನ ಪೀಳಿಗೆ ಸಹಕಾರಿ ವ್ಯವಸ್ಥೆಯ ಅಡಿಪಾಯ ತಿಳಿದುಕೊಳ್ಳುವುದು ಅನಿವಾರ್ಯ ಎಂದರು.
ಈ ಸಮಯದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ರೈತರೊಬ್ಬರು ಅಭಿಪ್ರಾಯ ಹಂಚಿಕೊಂಡು, ದಿವಂಗತ ಕಡವೆ ಹೆಗಡೆಯವರ ಸಹಾಯದ ಕಾರಣಕ್ಕೆ ನಮ್ಮ ಕುಟುಂಬ ಇಂದು ಸದೃಢವಾಗಿದೆ. ನಾವು ಕಷ್ಟದಲ್ಲಿದ್ದಾಗ ನಮ್ಮ ಕುಟುಂಬವನ್ನು ಕಡವೆ ಹೆಗಡೆಯವರು ಎತ್ತಿ ನಿಲ್ಲಿಸಿದ್ದಾರೆ. ಅವರ ಆಶಯಗಳಿಗೆ-ವಿಚಾರಗಳಿಗೆ ಪೂರಕವಾಗಿಯೇ ರಾಮಕೃಷ್ಣ ಹೆಗಡೆಯವರೂ ಸಹ ಕೆಲಸ ಮಾಡುತ್ತಿದ್ದಾರೆ. ಇವರಿಗೆ ನಮ್ಮ ಎಲ್ಲರ ಬೆಂಬಲ ಸದಾ ಇರುವುದಾಗಿ ಹೇಳಿದರು.
ಈ ವೇಳೆ ಅಗ್ರಿಕಲ್ಚರಲ್ ಡೆವಲಪ್ಮೆಂಟ್ ಸೊಸೈಟಿ ನಿರ್ದೇಶಕ ಶ್ರೀಪಾದ ಹೆಗಡೆ ಕಡವೆ, ಟಿಎಸ್ಎಸ್ ನಿರ್ದೇಶಕ ಬಾಲಚಂದ್ರ ಹೆಗಡೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಟಿ ಹೆಗಡೆ ವಹಿಸಿದ್ದರು. ಯುವ ಸಹಕಾರಿ ಧುರೀಣ ಪ್ರವೀಣ್ ಗೌಡರ್ ತೆಪ್ಪಾರ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಸ್ಥಳೀಯರಾದ ಗೋಪಾಲಕೃಷ್ಣ ಹೆಗಡೆ ವಂದಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ರೈತರು, ಸಹಕಾರಿ ಬಂಧುಗಳು ಇದ್ದರು. ಇದೇ ವೇಳೆ ಮಂಜುಗುಣಿಯ ಶ್ರೀ ವೇಂಕಟರಮಣ ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಲಾಯಿತು.