ಗೋಕರ್ಣ: ವಿಜ್ಞಾನದಂಥ ವಿಷಯಗಳಲ್ಲಿ ಪ್ರಯೋಗಗಳು ಹಾಗೂ ಪ್ರಯೋಗಾಲಯ ಚಟುವಟಿಕೆಗಳು ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾರ್ವಭೌಮ ಗುರುಕುಲದಲ್ಲಿ ಇತ್ತೀಚೆಗೆ ಸ್ಟೆಮ್ (ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಮ್ಯಾಥ್ಸ್) ಉದ್ಘಾಟನೆ ಮತ್ತು ಪ್ರಾಯೋಜಕರ ಕೊಡುಗೆ ಹಾಗೂ ಬೆಂಬಲವನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ವಿಷಯವನ್ನು ಬೋಧಿಸುವಾಗ ಪ್ರಯೋಗಗಳ ಮೂಲಕ ಕಲಿಸಿದರೆ ಅದು ಹೆಚ್ಚು ಮನದಟ್ಟಾಗುತ್ತದೆ. ನಾವು ಕೇಳಿದ ವಿಷಯಕ್ಕಿಂತ ನೋಡಿದ ವಿಷಯಗಳು ಸುಧೀರ್ಘ ಕಾಲ ನೆನಪಿನಲ್ಲಿ ಉಳಿಯುತ್ತವೆ ಎಂದು ಅಭಿಪ್ರಾಯಪಟ್ಟರು.
ಇಐಎ ವೋಲ್ವೊ ಇಂಡಿಯಾದ ಸಿಎಸ್‌ಆರ್ ನಿರ್ದೇಶಕ ಜಿ.ವಿ.ರಾವ್ ಮಾತನಾಡಿ, ಸ್ಟೆಮ್ ಮಿನಿ ಸೈನ್ಸ್ ಲ್ಯಾಬ್‌ನ ಯಶಸ್ಸಿಗೆ ಸಂಸ್ಥೆಯ ಪ್ರಯತ್ನವನ್ನು ಶ್ಲಾಘಿಸಿದರು. ಸಂಸ್ಥೆಗೆ ನಿರಂತರ ಬೆಂಬಲ ಮುಂದುವರಿಸುವುದಾಗಿ ಈ ಸಂದರ್ಭದಲ್ಲಿ ಅವರು ಭರವಸೆ ನೀಡಿದರು. ನಂತರ ‘ನೀವೇ ಮಾಡಿ’ ಮಾದರಿ ತಯಾರಿಕೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ಮಾಧವಿ ರಾವ್, ವೋಲ್ವೊ ಇಂಡಿಯಾದ ಕಂಪನಿ ಕಾರ್ಯದರ್ಶಿ ಎಲ್.ಆರ್.ಹೆಗಡೆ, ಸ್ಟೆಮ್ ವ್ಯವಸ್ಥಾಪಕ ನಾಗದೇವ್, ವಿವಿವಿ ಆಡಳಿತಾಧಿಕಾರಿ ಪ್ರಸನ್ನ ಕುಮಾರ್ ಟಿ.ಜಿ, ಮುಖ್ಯೋಪಾಧ್ಯಾಯಿನಿ ಸೌಭಾಗ್ಯ ಭಟ್ಟ ಮತ್ತಿತರರು ಉಪಸ್ಥಿತರಿದ್ದರು.
ಮಾನಸ ಆರ್ಯೆ ಕಾರ್ಯಕ್ರಮ ನಿರೂಪಿಸಿದರು. ವಿಜ್ಞಾನ ವಿಭಾಗದ ಅಧ್ಯಾಪಕ ಕಿರಣ್ ಜೆ.ನಾಯಕ್ ಸ್ವಾಗತಿಸಿದರು. ವಿಜ್ಞಾನ ಶಿಕ್ಷಕಿ ಅನುಪಮಾ ಜಿ. ಸ್ಟೆಮ್ ಲ್ಯಾಬ್ ಬಳಕೆ ಸಾಧ್ಯತೆಯನ್ನು ವಿವರಿಸಿದರು.