ಕಾರವಾರ: ಮಂಗಳವಾರ ಒಂದೇ ದಿನ ಸುರಿದ ಮಹಾಮಳೆಗೆ ಉತ್ತರಕನ್ನಡ ತತ್ತರಿಸಿದೆ. ಹೆದ್ದಾರಿಗಳಲ್ಲಿ ನೀರು ನಿಂತು ವಾಹನಗಳ ಓಡಾಟಕ್ಕೆ ಅಡಚಣೆಯಾದರೆ, ನಗರ ಪ್ರದೇಶದ ಅಂಗಡಿ- ಮನೆಗಳಿಗೂ ನೀರು ನುಗ್ಗಿ ಜನಜೀವನ ಅಸ್ತವ್ಯಗೊಂಡಿದೆ.
ಉತ್ತರಕನ್ನಡದ ಕರಾವಳಿಯಲ್ಲಿ ಮಂಗಳವಾರ ಬೆಳಿಗ್ಗೆ ಆರಂಭವಾದ ಮಳೆ, ಮಧ್ಯರಾತ್ರಿಯವರೆಗೂ ಸುರಿದಿದೆ. ಕಾರವಾರ, ಭಟ್ಕಳ ತಾಲೂಕುಗಳಲ್ಲಿ ಮೇಘಸ್ಫೋಟವಾದಂತೆ ನಗರ ಪ್ರದೇಶದಲ್ಲೇ ಅತಿಹೆಚ್ಚು ಮಳೆಯಾಗಿದ್ದು, ನಗರದ ಪ್ರಮುಖ ರಸ್ತೆಗಳು ನೀರಿನಿಂದ ಜಲಾವೃತವಾದವು. ಭಟ್ಕಳದ ಶಂಸುದ್ದೀನ್ ಸರ್ಕಲ್, ರಂಗೀಕಟ್ಟೆ ಹೆದ್ದಾರಿ, ಕಾರವಾರ- ಇಳಕಲ್ ಹೆದ್ದಾರಿ, ಹಬ್ಬುವಾಡ, ಹೈಚರ್ಚ್ ಸೇರಿದಂತೆ ಅನೇಕ ರಸ್ತೆಗಳಲ್ಲಿ ನೀರು ನಿಂತಿದೆ. ಕಾರವಾರದ ಬಸ್ ಡಿಪೋದಲ್ಲಿ ನೀರು ನಿಂತು ಬಸ್ ಗಳ ಓಡಾಟಕ್ಕೆ ಅಡಚಣೆಯಾಗಿದ್ದು, ಆಫೀಸ್ ರೂಮ್ ಗೂ ಸಹ ನೀರು ನುಗ್ಗಿದೆ.
ಇನ್ನು ಮಳೆಗೆ ಉತ್ತರಕನ್ನಡದಲ್ಲಿ ಮೊದಲ ಸಾವಾಗಿದೆ. ಅರಗಾದಲ್ಲಿ ಮನೆಯೊಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಈಕೆಯ ಮನೆಯ ಮುಂಭಾಗದಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿತ್ತು. ಕಾಲುಜಾರಿ ಈಕೆ ಮೃತಪಟ್ಟಿರಬಹುದು ಎನ್ನಲಾಗಿದೆ.
ರಾಜ್ಯ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಬುಧವಾರ ಭಾರೀ ಮಳೆ ಬೀಳುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಕರಾವಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಕರಾವಳಿಯ ಹೆಚ್ಚಿನ ಭಾಗಗಳಲ್ಲಿ ಇಂದು 115.6ಮಿ.ಮೀ.ನಿಂದ 204.4ಮಿ.ಮೀ. ಮಳೆ ಬೀಳಲಿದ್ದು, ಕೆಲವು ಕಡೆಗಳಲ್ಲಿ ಅತೀ ಹೆಚ್ಚು ಅಂದರೆ 204.4 (20ಸೆ.ಮಿ.) ಮಿ.ಮೀ.ಗಳಿಂತಲೂ ಅಧಿಕ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.
ಗುರುವಾರ ಎಲ್ಲೋ ಅಲರ್ಟ್, ಶುಕ್ರವಾರ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಈ ಅವಧಿಯಲ್ಲಿ ಗಾಳಿಯು ಗಂಟೆಗೆ 45ರಿಂದ 55ಕಿ.ಮೀ. ವೇಗದಲ್ಲಿ ಬೀಸಲಿದೆ. ಮಂಗಳೂರಿನಿಂದ ಕಾರವಾರದವರೆಗಿನ ಕಡಲಿನಲ್ಲಿ 3.5ಮೀ. ಎತ್ತರದ ಅಲೆಗಳು ದಡವನ್ನು ಅಪ್ಪಳಿಸುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಹೀಗಾಗಿ ಜುಲೈ 8ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಿದೆ.