ಅಂಕೋಲಾ: ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ಮನುಷ್ಯನಿಗೆ ಯಾವುದೇ ರೀತಿಯ ಆರೋಗ್ಯದಲ್ಲಿ ತೊಂದರೆಯಾದರೂ ಕೂಡ ವೈದ್ಯರ ಬಳಿಯೇ ತೆರಳಿ ಚಿಕಿತ್ಸೆ ಪಡೆದು ಗುಣಮುಖರಾಗಬೇಕಾಗುತ್ತದೆ. ಹೀಗಾಗಿ ಸಮಾಜದಲ್ಲಿ ವೈದ್ಯರಿಗೆ ಅತ್ಯಂತ ಪಾವಿತ್ರತೆಯ ಸ್ಥಾನಮಾನವಿದೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿಯ ತಾಲೂಕು ಅಧ್ಯಕ್ಷ ಡಿ.ಜಿ.ನಾಯ್ಕ ಹೇಳಿದರು.
ಪಟ್ಟಣದ ಸಾಲು ಮರದ ತಿಮ್ಮಕ್ಕ ಉದ್ಯಾನವನದಲ್ಲಿ ವೈದ್ಯರ ದಿನಚರಣೆಯ ನಿಮಿತ್ತ ರಾಷ್ಟ್ರೀಯ ಈಡಿಗ ಮಹಾಮಂಡಳಿ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವೈದ್ಯ ದಂಪತಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ಕುಮಟಾದ ವೈದ್ಯ ದೀಪಕ ಕೆ. ನಾಯ್ಕ ಮಾತನಾಡಿ, ನಾವು ನಮ್ಮ ಕರ್ತವ್ಯವನ್ನು ನಿರ್ವಹಿಸುತ್ತೇವೆ. ಬಡವರು, ನಿರ್ಗತಿಕರು ಆಸ್ಪತ್ರೆಗೆ ಬಂದ ಸಂದರ್ಭದಲ್ಲಿ ಅವರಿಗೆ ಸಹಕಾರವನ್ನು ನೀಡುತ್ತೇವೆ. ವೈದ್ಯರಾದವರು ಕೇವಲ ಹಣಕ್ಕೆ ಮಾತ್ರ ಸೀಮಿತವಾಗದೇ ಮಾನವೀಯತೆ ಹೊಂದಿರುವ ಸಂಖ್ಯೆಯೂ ಹೆಚ್ಚಿದೆ. ನಮ್ಮ ಅಳಿಲು ಸೇವೆ ಗುರುತಿಸಿ ಸನ್ಮಾನ ಮಾಡಿರುವುದು ಇನ್ನಷ್ಟು ಜವಾಬ್ದಾರಿ ಹೆಚ್ಚಿಸಿದೆ ಎಂದರು.
ವೈದ್ಯ ಡಾ.ಕರುಣಾಕರ ನಾಯ್ಕ ಮಾತನಾಡಿ, ಈಡಿಗ ಸಮಾಜದಲ್ಲಿ ಇನ್ನು ಜಾಗೃತಿ ಉಂಟಾಗಬೇಕಿದೆ. ಇಲ್ಲಿ ತುಂಡು ಭೂಮಿ ಮಾತ್ರ ಇದ್ದು, ಇದನ್ನೇ ನಂಬಿಕೊoಡು ಬದುಕಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬರು ಉನ್ನತ ಶಿಕ್ಷಣ ಪಡೆದು ಸರಕಾರಿ ಅಥವಾ ಸ್ವ ಉದ್ಯೋಗವನ್ನು ಕಂಡುಕೊoಡಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಸಮಾಜದವರನ್ನು ಗುರುತಿಸಿ ಪ್ರತಿಭಾ ಪುರಸ್ಕಾರ, ಸನ್ಮಾನ ಮಾಡುವುದು ಶ್ಲಾಘನೀಯವಾದದ್ದು ಎಂದರು.
ವೈದ್ಯರಾದ ಡಾ.ರಕ್ಷಿತಾ ಎಂ.ಎಚ್ ಅಂಕೋಲಾ, ಡಾ. ಚೈತ್ರಾ ಡಿ.ಎಸ್.ಕುಮಟಾ ಇವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಉಪಾಧ್ಯಕ್ಷ ಸಂಜೀವ ಆರ್. ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷೆ ಮಂಜುಳಾ ನಾಯ್ಕ ಮಾತನಾಡಿದರು. ಪದಾಧಿಕಾರಿಗಳಾದ ಲೀಲಾವತಿ ಬಿ.ನಾಯ್ಕ, ಶ್ರೀಪಾದ ಟಿ.ನಾಯ್ಕ, ರಮೇಶ ಎಸ್. ನಾಯ್ಕ ಉಪಸ್ಥಿತರಿದ್ದರು. ಉಪಾಧ್ಯಕ್ಷ ಉಮೇಶ ಎನ್. ನಾಯ್ಕ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಾಗರಾಜ ಎಂ. ನಿರ್ವಹಿಸಿದರು. ಯುವ ಅಧ್ಯಕ್ಷ ಮಂಜುನಾಥ ಕೆ.ನಾಯ್ಕ ವಂದಿಸಿದರು