ಕಾರವಾರ: ಮುಂಗಾರು ವಿಳಂಬವಾಗಿ ಆರಂಭವಾಗಿ ಜೂನ್ ತಿಂಗಳಿಡೀ ನಿರೀಕ್ಷಿತ ಮಳೆ ಸುರಿಯದಿದ್ದರೂ, ಜುಲೈನಲ್ಲಿ ನಿರೀಕ್ಷೆಗಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ಕರಾವಳಿಯಲ್ಲಿ ಜು.4ರಿಂದ ಮೂರು ದಿನಗಳ ಕಾಲ ಉತ್ತಮ ಮಳೆಯಾಗಲಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿಯುವ ನಿರೀಕ್ಷೆ ಇದೆ ಎಂಬುದಾಗಿ ಐಎಂಡಿಯ ಅಧಿಕಾರಿಗಳು ತಿಳಿಸಿದ್ದಾರೆ. ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಈ ತಿಂಗಳಿಡೀ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಜು.4ರಿಂದ ಮುಂದಿನ ಒಂದು ವಾರ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಜು.6ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ವೈಜ್ಞಾನಿಕ ಹವಾಮಾನ ಮುನ್ಸೂಚನೆಗೆ ಪೂರಕವಾಗಿ ಜು.6ರಂದು ಇನ್ನೊಂದು ಮಹಾಮಳೆ ನಕ್ಷತ್ರ ಪುನರ್ವಸು ಕೂಡ ಆರಂಭಗೊಳ್ಳಲಿದೆ.