ಶಿರಸಿ: ತಾಲೂಕಿನ ಹೆಗಡೆಕಟ್ಟಾದಲ್ಲಿ ನಡೆದಿದೆ ಎನ್ನಲಾಗಿರುವ ಗೋಹತ್ಯೆಗೆ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಈ ವರೆಗೂ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡದಿರುವುದು ಗೋಹತ್ಯೆ ವಿಚಾರದಲ್ಲಿ ಶಾಸಕರ ನಡೆಯನ್ನು ಪ್ರಶ್ನಿಸುತ್ತದೆ ಎಂಬುದು ಸಾರ್ವಜನಿಕರಲ್ಲಿ ಚರ್ಚೆಗೆ ಒಳಪಡಿಸಿದೆ.
ಘಟನೆ ನಡೆದು 48 ಗಂಟೆಗಳಾದರೂ, ವಿಷಯ ಸಾರ್ವಜನಿಕವಾಗಿ 24 ಘಂಟೆ ಕಳೆದರೂ ಸಹ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಥವಾ ಯಾವುದೇ ಪತ್ರಿಕಾ ಹೇಳಿಕೆ ನೀಡದಿರುವುದು ಹಿಂದೂ ಸಮಾಜದ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಗೋಹತ್ಯೆ ನಿಷೇಧ ವಿಚಾರದಲ್ಲಿ ತದ್ವಿರುದ್ಧ ನಡೆಯನ್ನು ಈಗಾಗಲೇ ಪ್ರದರ್ಶಿಸಿದೆ. ತನ್ನದೇ ಕ್ಷೇತ್ರದಲ್ಲಿ ಹಿಂದೂಗಳಿಗೆ ಪವಿತ್ರ ಎನಿಸಿರುವ ಗೋವನ್ನು ಹತ್ಯೆಗೈದು ಸಾರ್ವಜನಿಕವಾಗಿ ತಲೆ ಬಿಸಾಡಿದ ದುರುಳರ ವಿರುದ್ದ ಧ್ವನಿಯೆತ್ತದ ಶಾಸಕ ಭೀಮಣ್ಣ ನಾಯ್ಕ ವಿರುದ್ಧ ಸಾರ್ವಜನಿಕರ ಹಾಗು ಹಿಂದೂ ಸಮಾಜದ ಜನತೆಯ ಆಕ್ರೋಶಕ್ಕೆ ಎಡೆಮಾಡಿಕೊಟ್ಟಂತಿದೆ. ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸಹ ದಿವ್ಯ ಮೌನಕ್ಕೆ ಜಾರಿದ್ದಾರೆ.
ನಿದ್ರಾವಸ್ಥೆಯಲ್ಲಿ ಜಿಲ್ಲಾ ಬಿಜೆಪಿ: ಗೋವು, ಹಿಂದುತ್ವದ ಹೆಸರಿನಲ್ಲಿ ಚುನಾವಣೆಯಲ್ಲಿ ಮತ ಕೇಳುವ ಬಿಜೆಪಿಗರು ಈಗ ತಮ್ಮ ಕಾಲ ಬುಡದಲ್ಲಿಯೇ ಅಮಾನುಷವಾಗಿ ಗೋ ಹತ್ಯೆ ನಡೆದಾಗ ಇನ್ನೂ ಎಚ್ಚರಗೊಳ್ಳದಿರುವುದು ಜಿಲ್ಲಾ ಬಿಜೆಪಿಯ ನಿತ್ರಾಣ ಸ್ಥಿತಿಯನ್ನು ತೋರಿಸುತ್ತದೆ. ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ ನಾಯಕ ಘಟನೆ ಖಂಡಿಸಿ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಕ್ಷೇತ್ರದ ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಈಗ ನಡೆದಿರುವ ಗೋ ಹತ್ಯೆ ವಿಚಾರದಲ್ಲಿ ಮೌನವನ್ನು ತಾಳಿರುವುದು ಕಾರ್ಯಕರ್ತರಿಗೆ ಬೇಸರವನ್ನುಂಟುಮಾಡಿದೆ.