ಶಿರಸಿ: ಧರ್ಮಸ್ಥಳ ಕನ್ಯಾಡಿ ಶ್ರೀ ಗುರುದೇವ ಮಠದಲ್ಲಿ ಲೋಕಕಲ್ಯಾಣ ಆತ್ಮೋನ್ನತಿಗಾಗಿ ಜುಲೈ 03 ರಿಂದ ಅಗಸ್ಟ 31 ರವರೆಗೆ 60 ದಿನಗಳ ಕಾಲ ಶ್ರೀ ರಾಮ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾರ್ತುಮಾಸ ಕಾರ್ಯಕ್ರಮ ನಡೆಯಲಿದೆ ಎಂದು ಶಿರಸಿ ತಾಲೂಕಾ ಆರ್ಯ ಈಡಿಗ ನಾಮಧಾರಿ ಬಿಲ್ಲವ ಸಮಾಜದ ಅಧ್ಯಕ್ಷರು ಹಾಗೂ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ತಿಳಿಸಿದ್ದಾರೆ.
ಚಾರ್ತುಮಾಸದ ಅಂಗವಾಗಿ ಜೂನ್ 02 ಸಂಜೆ ವೃತ ವಿಧಿ ವಿಧಾನ, ಸುದರ್ಶನ ಹೋಮ ಜೂನ್ 03 ರಂದು ಬೆಳಿಗ್ಗೆ ರಾಮತಾರಕ ಯಜ್ಞ, ಶ್ರೀರಾಮ ಕ್ಷೇತ್ರದ ಪರಿವಾರ ದೇವರುಗಳಿಗೆ ವಿಶೇಷ ಪೂಜೆ, ಬಳಿಕ ಶ್ರೀದೇವಿಲಿಂಗೇಶ್ವರ ದೇವಾಲಯದಿಂದ ಪುರಪ್ರವೇಶ, 11 ಗಂಟೆಯಿಂದ ಧಾರ್ಮಿಕ ಸಭಾಕಾರ್ಯಕ್ರಮ ನಡೆಯಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ ವೈದ್ಯ ಉದ್ಘಾಟಿಸಲಿದ್ದು, ಶಾಸಕ ಹರೀಶ ಪುಂಜಾ ಅಧ್ಯಕ್ಷತೆ ವಹಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡುರಾವ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಹಲವು ಶಾಸಕರು, ಮಾಜಿಸಚಿವರು, ಮಾಜಿಶಾಸಕರು ಭಾಗವಹಿಸಲಿದ್ದಾರೆ. ಈ ಬಾರಿ ಸ್ವಾಮಿಜಿಯವರು ಚಾರ್ತುಮಾಸವನ್ನು ಮೌನ ಚಾರ್ತುಮಾಸವಾಗಿ ಆಚರಿಸಲಿದ್ದು ಈ ಅವಧಿಯಲ್ಲಿ ಬರುವ 8 ಭಾನುವಾರವನ್ನು ಹೊರತುಪಡಿಸಿ ಇತರ ದಿನಗಳಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಸ್ವಾಮಿಗಳ ದರ್ಶನ ಇರುವುದಿಲ್ಲ. ಭಾನುವಾರದಂದು ಮಾತ್ರ ಸ್ವಾಮಿಗಳು ಪೂರ್ತಿದಿನ ಭಕ್ತಾದಿಗಳಿಗೆ ದರ್ಶನವನ್ನು ನೀಡಲಿದ್ದು, ಉಳಿದ ದಿನದಂದು ಬೆಳಿಗ್ಗೆಯಿಂದ ಸಂಜೆ 6 ಗಂಟೆಯ ತನಕ ಮೌನಾಚರಣೆಯಲ್ಲಿ ಇರುವರು. ಭಕ್ತರ ದರ್ಶನಕ್ಕೆ ಸಂಜೆ 6ರ ನಂತರ ಸ್ವಾಮಿಜಿಯವರು ಲಭ್ಯವಿರುತ್ತಾರೆ ಎಂದು ಸಮಾಜದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಗಣಪತಿ ಎಲ್. ನಾಯ್ಕ, ವೆಂಕಟೇಶ ನಾಯ್ಕ, ಗಣಪತಿ ಆರ್.ನಾಯ್ಕ, ಮಧು ಬಿಲ್ಲವ, ಅನಂತ ನಾಯ್ಕ, ರವಿ ನಾಯ್ಕ ಕಲ್ಲಕರಡಿ, ಶ್ರೀಧರ ನಾಯ್ಕ, ವಿವೇಕ ಪೂಜಾರಿ, ಈಶ್ವರ ನಾಯ್ಕ ಉಪಸ್ಥಿತರಿದ್ದರು.