ಶಿರಸಿ : “ಪಶ್ಚಿಮ ಘಟ್ಟದ ಪ್ರದೇಶಕ್ಕೆ ಭೇಟಿ ನೀಡುತ್ತೇನೆ. ಕಾನು ದೇವರಕಾಡು ಯೋಜನೆಗಳ ಬಗ್ಗೆ ಆದ್ಯತೆ ನೀಡುತ್ತೇವೆ” ಎಂದು ರಾಜ್ಯ ಅರಣ್ಯ-ಪರಿಸರ ಸಚಿವ ಈಶ್ವರ ಖಂಡ್ರೆ ವೃಕ್ಷಲಕ್ಷ ನಿಯೋಗಕ್ಕೆ ತಿಳಿಸಿದರು.
ಜೀವವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ನೇತೃತ್ವದಲ್ಲಿ ಇತ್ತೀಚೆಗೆ ವೃಕ್ಷಲಕ್ಷ ನಿಯೋಗ ಬೆಂಗಳೂರಿನ ವಿಕಾಸ ಸೌಧದಲ್ಲಿ ಮನವಿ ಶಿಫಾರಸು ಸಲ್ಲಿಸಿತು. ಪಶ್ಚಿಮಘಟ್ಟದಲ್ಲಿ 5000 ಎಕರೆ ಅರಣ್ಯ ಪ್ರದೇಶ ಕಬಳಿಸಲು ಖಾಸಗಿಯವರು ನ್ಯಾಯಾಲಯಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಇಂಥ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅನಂತ ಹೆಗಡೆ ಅಶೀಸರ ಒತ್ತಾಯಿಸಿದರು. ಕಾರವಾರ – ಅಂಕೋಲಾ ಗ್ರೀನ್‌ಬೆಲ್ಟ ಯೋಜನೆ ಜಾರಿ ಮಾಡಲು ಮನವಿ ಮಾಡಿದರು.
“ರಾಜ್ಯದ ನೂತನ ಮುಂಗಡ ಪತ್ರದಲ್ಲಿ ಗ್ರೀನ್ ಬಜೆಟ್‌ಗೆ ಆದ್ಯತೆ ನೀಡಲು ಕೋರುತ್ತೇವೆ. ಸುಸ್ಥಿರ ಅಭಿವೃದ್ಧಿ ಕುರಿತ ಪ್ರಸ್ತಾವನೆಗಳನ್ನು ಬಜೆಟ್‌ನಲ್ಲಿ ಪ್ರಕಟಿಸಲು ಮನವಿ ಮಾಡಿದರು. ಪಶ್ಚಿಮ ಘಟ್ಟದ ಗ್ರಾಮ ಸಾಮೂಹಿಕ ಅರಣ್ಯಗಳ ಸಂರಕ್ಷಣೆಗೆ ವಿಶೇಷ ಯೋಜನೆ ಪ್ರಕಟಿಸಬೇಕು. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಪ್ರದೇಶಗಳಲ್ಲಿ ವ್ಯಾಪಕ ವನೀಕರಣ, ಕೃಷಿ ಅರಣ್ಯಗಳ ಅಭಿವೃದ್ಧಿ ಯೋಜನೆ ರೂಪಿಸಬೇಕು.” ಎಂದು ನಿಯೋಗ ಮನವಿ ಸಲ್ಲಿಸಿತು.
ಅರಣ್ಯ, ಜೇನುಕೃಷಿ, ಸೋಲಾರ್ ಬಯೋಗ್ಯಾಸ್, ಸೌರಬೇಲಿ, ಕೆರೆ- ಜಲಮೂಲ, ನದಿಮೂಲಗಳ ಸಂರಕ್ಷಣೆ, ಹನಿನೀರಾವರಿ, ಸಾವಯವ ಕೃಷಿ ಮುಂತಾದ ವಿಕೇಂದ್ರೀಕೃತ ಸುಸ್ಥಿರ ಗ್ರಾಮೀಣ ವಿಕಾಸ ಯೋಜನೆಗಳನ್ನು ಪ್ರಕಟಿಸಬೇಕು. ಈ ಯೋಜನೆಗಳ ತಯಾರಿ, ಜಾರಿಯಲ್ಲಿ ಗ್ರಾಮ ಅರಣ್ಯ ಸಮಿತಿಗಳು, ಕೆರೆ ಅಭಿವೃದ್ಧಿ ಸಂಘಗಳು, ಪಂಚಾಯತ ಜೀವವೈವಿಧ್ಯ ಸಮಿತಿಗಳು, ರೈತ ಒಕ್ಕೂಟಗಳು ಮಹಿಳಾ ಸ್ವ ಸಹಾಯ ಸಂಘಗಳು ಗ್ರಾಮ ಸಹಕಾರಿ ಸಂಘಗಳು ಪಾಲ್ಗೊಳ್ಳುವಂತೆ ಕ್ರಿಯಾ ಯೋಜನೆ ರೂಪಿಸಬೇಕು ಎಂದು ನಿಯೋಗ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಉನ್ನತ ಅರಣ್ಯ ಅಧಿಕಾರಿಗಳು ಉಪಸ್ಥಿತರಿದ್ದರು. ಅರಣ್ಯ ಪರಿಸರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ ಅವರು ರಾಜ್ಯದ 3.3 ಲಕ್ಷ ಹೆಕ್ಟೇರ್ ಡೀಮ್ಡ ಅರಣ್ಯಗಳ ರಕ್ಷಣೆಗೆ ಸರ್ಕಾರ ಕ್ರಮಕೈಗೊಳ್ಳಲಿದೆ” ಎಂದು ತಿಳಿಸಿದರು. ಇಕೋ ಬಜೆಟ್‌ನಲ್ಲಿ ಕಾನು ಅರಣ್ಯಗಳ ರಕ್ಷಣಾ ಯೋಜನೆ, ಕಾರವಾರ- ಅಂಕೋಲಾ ಹಸಿರುಪಟ್ಟಿ ಯೋಜನೆ ಕೈಗೊಳ್ಳುತ್ತೇವೆ ಎಂದು ನಿಯೋಗಕ್ಕೆ ತಿಳಿಸಿದರು. ಆಗುಂಬೆ, ತೋಟದಕೊಪ್ಪ, ಭೀಮಸೇತು ಕಾನು ಅರಣ್ಯ ಪ್ರಕರಣಗಳ ಬಗ್ಗೆ ಉಚ್ಛನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ” ಎಂದು ಅರಣ್ಯ ಕಾರ್ಯದರ್ಶಿಗಳು ಮಾಹಿತಿ ನೀಡಿದರು.