ಕಾರವಾರ: ನಗರದ ಬಾಲಮಂದಿರ ಪ್ರೌಢಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿವಾಜಿ ಪದವಿ ಮಹಾವಿದ್ಯಾಲಯದ ದೈಹಿಕ ನಿರ್ದೇಶಕರಾದ ತಾರಾನಾಥ ಎನ್. ಹರಿಕಂತ್ರ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಹ- ಮನಸ್ಸು- ನಡತೆ ಇವುಗಳ ಸಮ್ಮಿಲನವೇ ಯೋಗ. ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ತನ್ನ ದೇಹ ಮತ್ತು ಮನಸ್ಸನ್ನು ಶುದ್ಧವಾಗಿಡಬೇಕು. ಯೋಗ ಗುರು ಪತಂಜಲಿ ಮಹರ್ಷಿಗಳು ತಿಳಿಸಿದ ಅಷ್ಠಾಂಗ ಯೋಗಗಳನ್ನು ನಾವು ಪ್ರತಿನಿತ್ಯ ಮಾಡುತ್ತಿದ್ದರೆ ನಾವು ಆರೋಗ್ಯವಂತರಾಗಿರುತ್ತೇವೆ ಎಂದು ನುಡಿದರು. ಆನಂತರ ಸೂರ್ಯ ನಮಸ್ಕಾರ, ಪ್ರಾಣಾಯಾಮ ಸೇರಿದಂತೆ ಅನೇಕ ಯೋಗಾಸನಗಳನ್ನು ಮಕ್ಕಳಿಂದ ಮಾಡಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ ಮಾತನಾಡಿ, ಋಷಿಮುನಿಗಳಿಂದ ಹಿಂದಿನಿಂದಲೂ ಬೆಳೆದುಕೊಂಡು ಬಂದ ಈ ‘ಯೋಗ’ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದೆ. ಪ್ರಕೃತಿಯು ಹೇಗೆ ತನ್ನ ದಯಾಳು ಕೃಪೆಯಿಂದ ನಮ್ಮನ್ನೆಲ್ಲ ಸಂರಕ್ಷಿಸಿಕೊಂಡು ಬಂದಿದೆಯೋ ಹಾಗೆಯೇ ಯೋಗವು ಸಹ ನಮ್ಮ ಜೀವನಾಡಿಯಂತೆ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ನೀಡುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಪ್ರತಿನಿತ್ಯ ಕನಿಷ್ಠ ಪಕ್ಷ 15 ನಿಮಿಷವಾದರೂ ಯೋಗಾಭ್ಯಾಸವನ್ನು ಮಾಡಬೇಕು ಎಂದು ನುಡಿದರು.
ಆರಂಭದಲ್ಲಿ ದೈಹಿಕ ಶಿಕ್ಷಕ ರತ್ನಾಕರ ಮಡಿವಾಳ ಸ್ವಾಗತಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಿಕ್ಷಕಿ ಭಾರತಿ ಐಸಾಕ್, ಗೀತಾ ಐಸಾಕ್, ನಜೀರುದ್ದೀನ್ ಸೈಯದ್ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯೋಗದ ಕುರಿತಾದ ಡಾ.ದೇವಿಪ್ರಸಾದರವರ ವಿಡಿಯೋ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು. ಇದೇರೀತಿ ಬಾಲಮಂದಿರ ನರ್ಸರಿ ಮತ್ತು ಪ್ರಾಥಮಿಕ ಶಾಲೆಯಲ್ಲಿಯೂ ಪ್ರತ್ಯೇಕವಾಗಿ ಯೋಗ ದಿನವನ್ನು ಆಚರಿಸಲಾಯಿತು.