ಕಾರವಾರ: ತಾಲೂಕಿನ ಶಿರವಾಡ ಗ್ರಾಮ ಪಂಚಾಯತಿಯಲ್ಲಿ ರೋಜಗಾರ್ ದಿನ ಆಚರಿಸಿ ಕೂಲಿಕಾರರಿಗೆ ನರೇಗಾ ಯೋಜನೆಯ ಮಾಹಿತಿ ವಿನಿಮಯ ಮಾಡುವ ಮೂಲಕ ಕೆಲಸಕ್ಕೆ ಬರುವಂತೆ ಮನವಿ ಮಾಡಲಾಯಿತು.
ತಾಲೂಕಿನ ಶಿರವಾಡ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ವಾರ್ಡ ಸಭೆಯ ನಂತರ ರೋಜಗಾರ್ ದಿನ ಕೈಗೊಳ್ಳುವ ಉದ್ದೇಶ, ನರೇಗಾ ಕೂಲಿಕಾರರಿಗೆ ಸಿಗುವ ಸೌಲಭ್ಯಗಳು ಹಾಗೂ ಕಾಮಗಾರಿಯಲ್ಲಿನ ವಿಧಗಳು ಮತ್ತು ಯೋಜನೆಯ ರೂಪುರೇಷೆಗಳ ಬಗ್ಗೆ ಸಂಕ್ಷಿಪ್ತವಾಗಿ ಐಇಸಿ ಸಂಯೋಜಕರಾದ ಪೂರ್ಣಿಮಾ ಗೌಡ ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಕೈಜೋಡಿಸುವುದಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಭರವಸೆ ನೀಡಿದರು. ಜೊತೆಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಹೆಚ್ಚಿನ ಕಾಮಗಾರಿಗಳನ್ನು ಕೈಗೊಂಡು ಗ್ರಾಮದ ಅಭಿವೃದ್ಧಿಗೆ ಸಹಕರಿಸಲು ಪ್ರಯತ್ನಿಸುತ್ತೆವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ನರೇಗಾ ಕೂಲಿಕಾರರಿಗೆ ಆರೋಗ್ಯ ತಪಾಸಣೆಗಾಗಿ ಕೈಗೊಂಡ ಆರೋಗ್ಯ ಅಮೃತ ಅಭಿಯಾನದ ಸದುಪಯೋಗ ಪಡೆದು, ಕೂಲಿಕಾರರರು ಸದೃಢವಾಗಿತುವಂತೆ ಆರೋಗ್ಯ ಕಾಪಾಡಿಕೊಳ್ಳುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಮಸ್ಥರಿಗೆ ಕರೆ ನೀಡಿದರು. ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಿಳಾ ಕೂಲಿಕಾರರೆ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಾಮುದಾಯಿಕ ಕಾಮಗಾರಿಗಳಲ್ಲಿ ಮಹಿಳೆಯರೆ ಪಾಲ್ಗೊಳ್ಳುತ್ತಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶ್ವಿನಿ ಬಾಂದೇಕರ್, ಉಪಾಧ್ಯಕ್ಷರಾದ ಪೂಜಾ ಮಾದ್ಲೆಕರ್, ಸದಸ್ಯರು ಹಾಗೂ ಗ್ರಾಮಸ್ಥರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಭಾಗಿಯಾಗಿದ್ದರು.