ಶಿರಸಿ: ನಗರದ ಸ್ವರ್ಣವಲ್ಲಿ ಯೋಗ ಮಂದಿರದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ನೂರಾರು ಜನರು ಸೇರಿ, ಉತ್ಸಾಹದಿಂದ ಸಾಮೂಹಿಕ ಯೋಗಾಭ್ಯಾಸ ಕೈಗೊಂಡು ಸಂಭ್ರಮಿಸಿದರು.
ಅಂತಾರಾಷ್ಟ್ರೀಯ ಯೋಗ ದಿನ ಅಂಗವಾಗಿ ತಾಲೂಕು ಯೋಗ ದಿನಾಚರಣೆ ಸಮಿತಿ ನಾನಾ ಸಂಘ ಸಂಸ್ಥೆಗ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಕಾರ್ಯಕ್ರಮ ಸಾಂಗವಾಗಿ ಸಂಪನ್ನಗೊಂಡಿತು.
ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು, ಸಮಾಜದ ವಿವಿಧ ವರ್ಗಗಳವರು ಈ ಸಂದರ್ಭದಲ್ಲಿ ಭಾಗವಹಿಸಿ, ನಾನಾ ಯೋಗ ಆಸನಗಳನ್ನು ಕೈಗೊಂಡರು.
ಸ್ಥಳೀಯ ಸಂಯೋಗ ಪ್ರಕೃತಿ ಚಿಕಿತ್ಸಾಲಯದ ಡಾ. ಅಶ್ವಥ್ ಹೆಗಡೆ, ಹಾಗೂ ಯೋಗ ಶಿಕ್ಷಕರಾದ ರಘುರಾಮ ಭಟ್ಟ, ನಯನಾ ಭಟ್ಟ ಯೋಗ ಮಾರ್ಗದರ್ಶಕರಾಗಿ ಪಾಲ್ಗೊಂಡರು.
ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಜ್ಯೋತಿ ಬೆಳಗಿ ಉದ್ಘಾಟಿಸಿದರು. ಭಾರತೀಯ ಪರಂಪರೆಯ ಅಮೂಲ್ಯ ನಿಧಾನವಾದ ಯೋಗಾಭ್ಯಾಸ ಇಂದು ವಿಶ್ವ ಮಟ್ಟದಲ್ಲಿ ಆಚರಣೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸಂಕಲ್ಪದ ಫಲವಾಗಿ ಯೋಗ ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವುದು ಭಾರತೀಯರಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಸಹಾಯಕ ಆಯುಕ್ತ ದೇವರಾಜ ಆರ್. ತಹಶೀಲ್ದಾರ ಸುಮಂತ ಉಪಸ್ಥಿತರಿದ್ದರು. ಡಾ ದಿನೇಶ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಯೋಗ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಹೆಗಡೆ ವಂದಿಸಿದರು. ಜನಾರ್ಧನ ಆಚಾರ್ಯ ನಿರೂಪಿಸಿದರು.
ಸಂಘಟಕ ಸಂಸ್ಥೆಗಳ ಪದಾಧಿಕಾರಿಗಳಾದ ಅನಿಲ ಕರಿ, ರಾಮಚಂದ್ರ ಭಟ್ಟ, ಸೋಮಪ್ರಕಾಶ ಶೇಟ್, ಶ್ಯಾಮ ಭಟ್ಟ, ಚೈತ್ರಾ ನಾಯಕ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯೋಗ ಶಿಕ್ಷಕಿ ಪ್ರಿಯಾ ಬಲಸೆ ಅವರನ್ನು ಸನ್ಮಾನಿಸಲಾಯಿತು. ಯೋಗ ಮಂದಿರ, ಉತ್ತರ ಕನ್ನಡ ಯೋಗ ಫೆಡರೇಶನ್, ಪತಂಜಲಿ ಯೋಗ ಸಮಿತಿ, ಆರ್ಟ್ ಆಫ್ ಲಿವಿಂಗ್, ರೋಟರಿ ಐಎಂಎ ಯೋಗ ಕೇಂದ್ರ, ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್, ಲಯನ್ಸ್ ಕ್ಲಬ್, ನಯನ ಫೌಂಡೇಶನ್, ನಿಸರ್ಗ ಟ್ರಸ್ಟ್, ಶಿರಸಿ ಇಂಜಿನಿಯ ರ್ಸ್ ಮತ್ತು ಆರ್ಕಿಟೆಕ್ಸ್ ಅಸೋಸಿಯೇಷನ್, ಗಾಯತ್ರಿ ಬಳಗ, ಆದರ್ಶ ವನಿತಾ ಸಮಾಜ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸ್ಥಳೀಯ ಘಟಕ, ಆರೋಗ್ಯ ಭಾರತಿ ಮುಂತಾದ ಸಂಘಟನೆಗಳ ಸಹಕಾರ, ಸಹಯೋಗದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ಸಂಘಟನೆಯಾಗಿತ್ತು.