ಸಿದ್ದಾಪುರ: ತಾಲೂಕಿನಲ್ಲಿ ಪ್ರಸಕ್ತ ವರ್ಷ ವಾಡಿಕೆಯ ಮಳೆಗಿಂತ ತೀರಾ ಕಡಿಮೆ ಮಳೆಯಾಗಿರುವುದರಿಂದ ಬರಪೀಡಿತ ತಾಲೂಕು ಎಂದು ಘೋಷಿಸಬೇಕು ಎಂದು ಉತ್ತರ ಕನ್ನಡ ಜಿಲ್ಲಾ ರೈತ ಸಂಘ ಮುಖ್ಯಮಂತ್ರಿಗಳನ್ನು ಆಗ್ರಹಿಸಿದೆ.
ಈ ಕುರಿತು ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿದ್ದಾರೆ. ಈ ಹಿಂದೆ ಅಂದರೆ ಕಳೆದ ವರ್ಷ ಜೂನದಲ್ಲಿ 394.3 ಮೀ. ಮೀ ಮಳೆಯಾಗಿತ್ತು. ಈ ವರ್ಷ ಕೇವಲ 89.3 ಮೀ.ಮೀ ಮಳೆಯಾಗಿದೆ. ಶೇ.77 ರಷ್ಟು ಮಳೆಯ ಕೋರತೆ ಉಂಟಾಗಿರುತ್ತದೆ. ಕಳೆದ ವರ್ಷ ಈ ಸಮಯದಲ್ಲಿ ವಾರ್ಷಿಕ ಬಿತ್ತನೆ 350- 400 ಹೆಕ್ಟೇರ್ ಇದ್ದು ಈ ವರ್ಷ ಕೇವಲ 25-30 ಹೆಕ್ಟೇರ್ ಅಷ್ಟೆ ಬಿತ್ತನೆ ಆಗಿರುತ್ತದೆ. ಜೂನದಲ್ಲಿ ವಾಡಿಕೆಯಂತೆ ಕಳೆದ ವರ್ಷ 272 ಮೀ.ಮೀ ಮಳೆಯಾಗಿತ್ತು. ಈ ವರ್ಷ ಕೇವಲ 52 ಮೀ. ಮೀ ಮಳೆಯಾಗಿರುತ್ತದೆ. ಹಾಗೂ ಮೇ. ತಿಂಗಳಿನಲ್ಲಿ ಕಳೆದ ವರ್ಷ 87 ಮೀ.ಮೀ ಮಳೆಯಾಗಿತ್ತು. ಆದರೆ ಈ ವರ್ಷ 27 ಮೀ.ಮೀ ಮಳೆಯಾಗಿದೆ. ಇದರಿಂದ ಸಿದ್ದಾಪುರ ತಾಲೂಕಿನಲ್ಲಿ ಕುಡಿಯುವ ನೀರಿಗೆ ತೀವ್ರತರಹದ ಸಮಸ್ಯೆ ಉಂಟಾಗಿದ್ದು ಕೆರೆ, ಹೊಳೆಗಳು ಸಹ ಬತ್ತಿ ಹೋಗಿದೆ. ಅಡಿಕೆ ಬೆಳೆ ಸಹ ಅರ್ದದಷ್ಟು ನಾಶವಾಗಿದೆ. ರೈತರು ಮುಂಗಾರು ಇಲ್ಲದೆ ಆತಂಕದಲ್ಲಿ ಇದ್ದಾರೆ. ಆದ್ದರಿಂದ ಸಿದ್ದಾಪುರ ತಾಲೂಕನ್ನು ತಕ್ಷಣವೇ ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು. ತಕ್ಷಣವೆ ಪರಿಹಾರದ ಪ್ಯಾಕೇಜನ್ನು ಬಿಡುಗಡೆ ಮಾಡಬೇಕು ಎಮದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಸಂಘದ ಜಿಲ್ಲಾಧ್ಯಕ್ಷ ಕೇರಿಯಪ್ಪ ನಾಯ್ಕ ಬೇಡ್ಕಣಿ, ಪ್ರಧಾನ ಕಾರ್ಯದರ್ಶಿ ಗೀತಾ ಹೆಗಡೆ, ಸಂಚಾಲಕರಾದ ಜಿ.ಬಿ.ನಾಯ್ಕ, ಕಾರ್ಯಾಧ್ಯಕ್ಷ ಟಿ.ಟಿ.ನಾಯ್ಕ ಮಾವಿನಗುಂಡಿ, ಪ್ರಮುಖರಾದ ಎಂ.ಐ.ನಾಯ್ಕ ಕೋಲಶಿರ್ಸಿ, ಗಂಗಾಧ ಗೌಡ, ಶಿವಾನಂದ ನಾಯ್ಕ, ನಾರಾಯಣ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು. ಉಪ ತಹಶೀಲ್ದಾರ ಡಿ.ಎಂ.ನಾಯ್ಕ ಮನವಿ ಸ್ವೀಕರಿಸಿದರು.