ಅಂಕೋಲಾ: ಪಟ್ಟಣದಲ್ಲಿ ನಡೆಸಲಾದ ನಗರೋತ್ಥಾನ ರಸ್ತೆ ಕಾಮಗಾರಿಗಳು ನಿಯಮ ಬಾಹಿರವಾಗಿ ಆಗಿರುವ ಕುರಿತು ಶಾಸಕ ಸತೀಶ ಸೈಲ್ ಅವರು ಪುರಸಭೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರೋತ್ಥಾನದ ಎರಡು ಕಾಮಗಾರಿಗಳು ಮತ್ತು ಪಟ್ಟಣದ ಕೆ.ಸಿ.ರಸ್ತೆ ಕಾಮಗಾರಿ ಪುರಸಭೆ ಸಾಮಾನ್ಯ ಸಭೆ ನಡೆಸಿ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತಂದು ಅವರ ಒಪ್ಪಿಗೆ ಮೇರೆಗೆ ಆರಂಭಿಸಬೇಕಾಗಿತ್ತು ಆದರೆ ಪುರಸಭೆಯ ಅನುಮತಿ ಪತ್ರ ಇಲ್ಲದೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಾಮಗಾರಿ ಪೂರೈಸಿ ಪುರಸಭೆಗೆ ಹಸ್ತಾಂತರ ಮಾಡಿರುವುದು ನಿಯಮ ಬಾಹಿರ, ತರಾತುರಿಯಲ್ಲಿ ಕಾಮಗಾರಿ ನಡೆಸುವ ಉದ್ದೇಶವೇನಿತ್ತು ಎಂದು ಅಧಿಕಾರಿಗಳಿಗೆ ಶಾಸಕ ಸತೀಶ ಸೈಲ್ ಬಿಸಿ ಮುಟ್ಟಿಸಿ ಕೂಡಲೇ ವರದಿ ಸಲ್ಲಿಸುವಂತೆ ಸೂಚಿಸಿದರು.
ಅಧಿಕಾರಿಗಳೇ ಎಲ್ಲವನ್ನೂ ತಮ್ಮ ಮನಸ್ಸಿಗೆ ಬಂದ0ತೆ ಮಾಡುವುದಾದರೆ ಚುನಾಯಿತ ಪ್ರತಿನಿಧಿಗಳು ಯಾಕೆ ಎಂದು ಪ್ರಶ್ನಿಸಿದ ಅವರು ಪುರಸಭೆ ವ್ಯಾಪ್ತಿಯಲ್ಲಿ ಕಾಮಗಾರಿಯನ್ನು ಬೇರೆ ಇಲಾಖೆಗೆ ಹಸ್ತಾಂತರಿಸುವ ಪೂರ್ವ ಎಲ್ಲಾ ಸದಸ್ಯರ ಗಮನಕ್ಕೆ ತಂದು ಒಪ್ಪಿಗೆ ಪಡೆಯಬೇಕು ಇದನ್ನು ಮಾಡದೇ ಪುರಸಭೆ ಲೋಕೋಪಯೋಗಿ ಇಲಾಖೆಗೆ ಕಾಮಗಾರಿ ನಡೆಸಲು ಅವಕಾಶ ಮಾಡಿಕೊಟ್ಟಿದೆ, ಲೋಕೋಪಯೋಗಿ ಇಲಾಖೆ ಸಹ ಯಾವುದೇ ಲಿಖಿತ ಅನುಮತಿ ಇಲ್ಲದೇ ಕಾಮಗಾರಿ ಪೂರೈಸಿದೆ ಈ ಕುರಿತು ಸಂಪೂರ್ಣ ವರದಿಯನ್ನು ನೀಡಿ ಜಿಲ್ಲಾಧಿಕಾರಿಗಳಿಗೆ ಪ್ರತಿ ಸಲ್ಲಿಸುವಂತೆ ತಹಶೀಲ್ಧಾರ ಅವರಿಗೆ ಸೂಚಿಸಿದರು.
ಈ ಕುರಿತು ಪುರಸಭೆ ಅಧಿಕಾರಿ ರಾಥೋಡ್ ಅವರು ವರದಿ ನೀಡಿ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳದೇ ಲೋಕೋಪಯೋಗಿ ಇಲಾಖೆಗೆ ಕಾಮಗಾರಿಗೆ ಅನುಮತಿ ನೀಡಿರುವುದು ಪುರಸಭೆಯ ವತಿಯಿಂದ ತಪ್ಪಾಗಿದೆ ಎಂದರು. ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಮಾತನಾಡಿ ಪುರಸಭೆ ಸದಸ್ಯರ ಒಪ್ಪಿಗೆ ಪಡೆಯದೆ ಕಾಮಗಾರಿ ಹಸ್ತಾಂತರಿಸಿರುವುದು ಸರಿಯಲ್ಲ ಎಂದು ತಿಳಿಸಿದರು.
ಅದೇ ರೀತಿ ಅಮದಳ್ಳಿಯಲ್ಲಿ ಯಾವುದೇ ಜಾಗ ಇಲ್ಲದೇ ಹಾಲಕ್ಕಿ ಸಭಾಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿರುವ ಕುರಿತು ಶಾಸಕ ಸತೀಶ ಸೈಲ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಭೂಮಿ ಪೂಜೆಗೆ ಹಾಜರಾಗಿದ್ದ ಲೋಕೋಪಯೋಗಿ ಇಲಾಖೆ ಎಂಜಿನೀಯರ ಶಶಿಕಾಂತ ಕೊಲ್ವೇಕರರನ್ನು ತರಾಟಗೆ ತೆಗೆದುಕೊಂಡು ಅಂಕೋಲಾದ ಬೆಳಸೆಯಲ್ಲಿ ಮುಂಜೂರು ಆಗಿರುವ ಹಾಲಕ್ಕಿ ಸಮುದಾಯ ಭವನಕ್ಕೆ ಕಾರವಾರ ತಾಲೂಕಿನ ಅಮದಳ್ಳಿಯಲ್ಲಿ ಭೂಮಿ ಪೂಜೆ ಮಾಡಲಾಗಿದೆ, ಹಣ ಮಂಜೂರು ಮಾಡಿ ಟೆಂಡರ್ ಕರೆದಿದ್ದಾರೆ ಆದರೆ ಈಗ ನೋಡಿದರೆ ಕಾಮಗಾರಿ ನಡೆಸಲು ಎಲ್ಲೂ ಜಾಗವೇ ಇಲ್ಲ ಇದು ಹಾಸ್ಯಾಸ್ಪದ ಎಂದು ಶಾಸಕ ಸತೀಶ ಸೈಲ್ ತಿಳಿಸಿದರು.