ದಾಂಡೇಲಿ: ನಗರದ ಬರ್ಚಿ ರಸ್ತೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಸರ ಸ್ವಚ್ಚತೆ ಕೈಗೊಂಡರು.
ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಸಿ. ಬಾಲಚಂದ್ರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಕೆ.ಶೇಠ್ ಅವರ ಮಾರ್ಗದರ್ಶನದಲ್ಲಿ ದಾಂಡೇಲಿ ವಲಯಾರಣ್ಯಾಧಿಕಾರಿ ಅಪ್ಪರಾವ್ ಕಲಶೆಟ್ಟಿಯವರ ನೇತೃತ್ವದಲ್ಲಿ ಹಾಗೂ ವಲಯದ ಉಪ ವಲಯಾರಣ್ಯಾಧಿಕಾರಿಗಳು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಹಕಾರದೊಂದಿಗೆ ಈ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಈ ವೇಳೆ ರಸ್ತೆ ಬದಿ ಹಾಗೂ ರಸ್ತೆ ಬದಿಯ ಅರಣ್ಯ ಪ್ರದೇಶದ ಎಲ್ಲೆಂದರಲ್ಲಿ ಹರಡಿಕೊಂಡಿದ್ದ ಪ್ಲಾಸ್ಟಿಕ್ ಚೀಲಗಳನ್ನು, ಪ್ಲಾಸ್ಟಿಕ್ ವಸ್ತುಗಳನ್ನು, ಪ್ಲಾಸ್ಟಿಕ್ ಹಾಗೂ ಮದ್ಯದ ಬಾಟಲಿಗಳನ್ನು ಸಂಗ್ರಹಿಸಿ, ಸ್ವಚ್ಚ ಪರಿಸರ ನಿರ್ಮಾಣದ ಕುರಿತಂತೆ ಜನಜಾಗೃತಿ ಮೂಡಿಸುವ ಕಾರ್ಯ ಮಾಡಲಾಯಿತು.
ಬರ್ಚಿ ರಸ್ತೆಯ ಕೇವಲ ಮೂರು ಕಿ.ಮೀ. ವ್ಯಾಪ್ತಿಯಲ್ಲಿ 800 ಕೆಜಿಗಿಂತಲೂ ಅಧಿಕ ಪ್ಲಾಸ್ಟಿಕ್ ಹಾಗೂ 2000ಕ್ಕೂ ಅಧಿಕ ಸರಾಯಿ ಖಾಲಿ ಬಾಟಲಿಗಳನ್ನು ಸಂಗ್ರಹಿಸಲಾಯಿತು. ಸ್ಥಳೀಯ ಅರಣ್ಯ ಪ್ರದೇಶದಲ್ಲಿ ಬೀಜದುಂಡೆಗಳನ್ನು ಬಿತ್ತಲಾಯಿತು.