ಕುಮಟಾ: ವಿದ್ಯಾರ್ಥಿಗಳು ಪುಸ್ತಕದ ಹುಳುವಾಗದೇ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕೆಂದು ಎಂದು ಧಾರವಾಡದ ಖ್ಯಾತ ಮನೋ ತಜ್ಞವೈದ್ಯ ಡಾ.ಆನಂದ ಪಾಂಡುರಂಗಿ ಕರೆ ನೀಡಿದರು.
ತಾಲೂಕಿನ ಗೋರೆಯ ಜಿ.ಎನ್.ಹೆಗಡೆ ಟ್ರಸ್ಟ್ ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜಿನ ಪ್ರಾರಂಭೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಜಿ.ಜಿ.ಹೆಗಡೆ ಹುಚ್ಚು, ಕಿಚ್ಚಿನ ನಡುವೆ ಬೆಳೆದು ಜೀವನದಲ್ಲಿ ಸಾಧನೆ ಮಾಡಿದ್ದಾರೆ. ಅವರ ಈ ಸಾಧನೆಯಿಂದ ಗುರುಕುಲ ಪದ್ದತಿಯ ಶಿಕ್ಷಣ ಸಂಸ್ಥೆ ಹುಟ್ಟು ಹಾಕಲು ಸಾಧ್ಯವಾಯಿತು. ಪ್ರಕೃತಿಯ ಸೌಂದರ್ಯದ ಸೊಬಗಿನ ಮಧ್ಯದಲ್ಲಿ, ಪ್ರಶಾಂತವಾದ ವಾತಾವರಣದಲ್ಲಿ ಗುರುಕುಲ ಪದ್ದತಿಯ ಶಿಕ್ಷಣ ಸಂಸ್ಥೆ ಕಟ್ಟಿ ನೂರಾರು ಮಕ್ಕಳಿಗೆ ವಿದ್ಯೆ ಧಾರೆಯೆರೆಯುತ್ತಿರುವುದು ಖುಷಿ ನೀಡಿದೆ. ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೇ ಗುಣಮಟ್ಟದ ಶಿಕ್ಷಣ ಪಡೆಯುವತ್ತ ಹೆಚ್ಚಿನ ಗಮನಹರಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಪ್ರತಿದಿನ 3 ರಿಂದ 4 ಘಂಟೆ ಏಕಾಗ್ರಚಿತ್ತದಿಂದ ಅಭ್ಯಾಸ ಮಾಡಬೇಕು. ಕೇವಲ ಪುಸ್ತಕದ ಹುಳುಗಳಾಗದೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸರ್ವತೋಮುಖ ಬೆಳವಣಿಗೆ ಹೊಂದಬೇಕು ಎಂದರು.
ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಡಾ.ಜಿ.ಜಿ.ಹೆಗಡೆ ಪ್ರಸ್ತಾವಿಕ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆ ಸಂಸ್ಕಾರದೊಂದಿಗೆ ಶಿಕ್ಷಣ ನೀಡುವ ಸದುದ್ದೇಶ ಹೊಂದಿದೆ. ಅನೇಕ ಸಾಧಕರನ್ನು ಪರಿಚಯಿಸುವ ತುಡಿತ ನಮ್ಮದು. ಅನೇಕ ಸಾಧಕರಂತೆ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳೂ ಸಾಧನೆಗೈಯಬೇಕೆಂಬ ಉದ್ದೇಶ ಹೊಂದಿದೆ. ವಿದ್ಯಾಸಂಸ್ಥೆ ಕಟ್ಟಬೇಕೆಂಬ ಬಯಕೆಯೂ ನನ್ನದಾಗಿತ್ತು. ಆ ಛಲ ಈಗ ಸಫಲವಾಗಿದೆ. ಕರೋನ ಕಾಲದಲ್ಲಿಯೂ ಅನೇಕ ಏಳುಬೀಳುಗಳ ನಡುವೆಯೂ ದೈವಾನುಗ್ರಹದಿಂದ ಈ ಸಂಸ್ಥೆ ಕಟ್ಟಿದ್ದೇನೆ. ನಮ್ಮಲ್ಲಿ ಅನೇಕ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಗೋರೆ ಶಿಕ್ಷಣ ಸಂಸ್ಥೆ ಮೇಲೆ ಪಾಲಕರು, ಪೋಷಕರು ವಿಶ್ವಾಸವಿಟ್ಟು ತಮ್ಮ ಮಕ್ಕಳನ್ನು ಕಳಿಸುತ್ತಿದ್ದಾರೆ. ದೈವಿ ಕೃಪೆಯಲ್ಲಿ ಬಲವಾದ ನಂಬಿಕೆ ಇದ್ದರೆ ಎಂತಹ ಸಾಧನೆಯನ್ನೂ ಮಾಡಬಹುದು ಎಂಬುದಕ್ಕೆ ನನ್ನ ಗುರುಕುಲ ಪದ್ದತಿಯ ಶಿಕ್ಷಣ ಸಂಸ್ಥೆ ಸಾಕ್ಷಿ ಎಂದರು.
ಈ ಸಂದರ್ಭದಲ್ಲಿ ಸಾಧನೆಗೈದ ದ್ವಿತೀಯ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ವೈಶಾಲಿ ವೆಂಕಟ್ರಮಣ ಭಟ್ಟ ಅವರನ್ನು ಸಮರ್ಥ ಹೆಗಡೆ, ರಕ್ಷಿತಾ ಹೆಗಡೆ, ಸಿಂಧು ಹೆಗಡೆ, ಶ್ರೀನಿಧಿ ಹೆಗಡೆ, ಧನ್ಯಾ ದೇವಾಡಿಗ, ರೋಹನ ಗುನಗಾ, ವಿಶಾಲ ಹೆಗಡೆ ಅವರನ್ನು ಪ್ರೋತ್ಸಾಹಿಸಿ, ಅಭಿನಂದಿಸಲಾಯಿತು. ಖ್ಯಾತ ಮನೋ ತಜ್ಞ ವೈದ್ಯ ಡಾ.ಆನಂದ ಪಾಂಡುರಂಗಿ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎನ್.ಭಟ್, ಖ್ಯಾತ ಸ್ತ್ರೀ ತಜ್ಞೆ, ಸಂಸ್ಥೆಯ ಕಾರ್ಯದರ್ಶಿ ಸೀತಾಲಕ್ಷ್ಮೀ ಹೆಗಡೆ, ಡಾ.ಅಶೋಕ ಭಟ್ಟ ಹಳಕಾರ್ ಇತರರು ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಚಾರ್ಯ ಡಿ.ಎನ್.ಭಟ್ ಸ್ವಾಗತಿಸಿದರು. ಶಿಕ್ಷಕಿ ಪೂಜಾ ಭಟ್ಟ ನಿರೂಪಿಸಿದರು. ವಾಣಿಜ್ಯ ವಿಭಾಗದ ಉನ್ಯಾಸಕಿ ಹರ್ಷಿತ ಎಸ್. ವಿ ವಂದಿಸಿದರು.