ದಾಂಡೇಲಿ: ತಾಲ್ಲೂಕಿನ ಕುಳಗಿ ಗ್ರಾಮದಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕುಳಗಿ ಗ್ರಾಮದ ನಿವಾಸಿ 46 ವರ್ಷ ವಯಸ್ಸಿನ ಮೌಲಾಸಾಬ್ ಪಕ್ರುಸಾಬ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಈತ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಎನ್ನಲಾಗಿದೆ. ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅಂದಾಜಿಸಲಾಗಿದೆ.
ಈತ ಮನೆಯಲ್ಲಿ ನೇಣಿಗೆ ಶರಣಾಗಿ ಮೂರ್ನಾಲ್ಕು ದಿನಗಳು ಆಗಿರಬಹುದೆಂದು ಅಂದಾಜಿಸಲಾಗಿದೆ. ಶುಕ್ರವಾರ ಮೃತದೇಹ ಕೊಳೆತು ವಾಸನೆ ಬರತೊಡಗಿದ್ದ ಹಿನ್ನಲೆಯಲ್ಲಿ ಸ್ಥಳೀಯರು ಅಂಬಿಕಾನಗರ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ. ಅಂಬಿಕಾನಗರ ಪಿಎಸೈ ಮಂಜುನಾಥ್ ಅವರ ನೇತೃತ್ವದ ಪೊಲೀಸರ ತಂಡ ತಕ್ಷಣವೆ ಕುಳಗಿಗೆ ಭೇಟಿ ನೀಡಿ ಮನೆಯ ಬಾಗಿಲು ಒಡೆದು ಮನೆಯೊಳಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಕೊಳೆತು ನಾರುತ್ತಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.