ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದ ಹಳೇಯೂರು ಶ್ರೀ ಶಂಕರ-ನಾರಾಯಣ ದೇವಳದಲ್ಲಿ ಇತ್ತೀಚಿಗೆ ಶ್ರೀ ಅಶ್ವತ್ಥ ವೃಕ್ಷಕ್ಕೆ ಬ್ರಹ್ಮೋಪದೇಶ ನೀಡುವ ಕಾರ್ಯಕ್ರಮ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳವರು, ಈ ಹಿಂದೆ ಶ್ರೀ ಶಂಕರ-ನಾರಾಯಣ ದೇವಳದಲ್ಲಿ ಅಶ್ವತ್ಥ ಸಸ್ಯಾರೋಪಣ ಮಾಡಿದ್ದರು. ಆ ಸಸ್ಯ ಈಗ ಬಾಲ್ಯಾವಸ್ಥೆಯಿಂದ ಯೌವನದತ್ತ ಸಾಗಿ ಸದೃಢವಾಗಿ ಬೆಳೆದು ದೇಗುಲದ ಆವಾರದಲ್ಲಿ ಕಂಗೊಳಿಸುತ್ತಿದೆ. ಸಾವಿರಾರು ಎಲೆಗಳಿಂದ ಆವೃತ್ತವಾದ ಅಶ್ವತ್ಥ ಗಿಡಕ್ಕೆ ಬ್ರಹ್ಮೋಪದೇಶ ನೀಡುವ ಘನ ಕಾರ್ಯ ಶ್ರೀ ಸ್ವರ್ಣವಲ್ಲೀ ಆಸ್ಥಾನ ವಿದ್ವಾಂಸ ಬಾಲಚಂದ್ರ ಶಾಸ್ತ್ರಿ ಹುಲದೇವನಸರ ಇವರ ಆಚಾರ್ಯತ್ವದಲ್ಲಿ ವೇ.ಮೂ. ನಾರಾಯಣ ಶಾಸ್ತ್ರೀ ಸಂಪೇಸರ ಇವರ ಪೌರೋಹಿತ್ಯದಲ್ಲಿ ಎರಡು ದಿನಗಳು ಕಾಲ 6 ಜನ ವೈದಿಕರು ಧಾರ್ಮಿಕ ವಿಧಿಗಳನ್ನು, ಬ್ರಹ್ಮಕೂರ್ಚ ಹವನ-ಗಣಹವನ, ಸಾಮೂಹಿಕ ಪ್ರಾರ್ಥನೆ-ದೇವನಾಂದಿ-ಪುಣ್ಯಾಹ-ಮಹಾಸಂಕಲ್ಪ-ಋತ್ವಿಕ್‌ವರಣ ಮಧುಪರ್ಕ ಪೂಜಾ – ಸ್ಥಾನ ಶುದ್ಧಿ ಹೋಮ ಸಪ್ತಶುದ್ಧಿ ಅಘೋರಾಸ್ತ್ರ ಜಪ – ಸಂಸ್ಕಾರ ಹೋಮ, ಮಂಟಪ ಸಂಸ್ಕಾರ-ಉದಕ ಶಾಂತಿ –ವಾಸ್ತು ರಾಕ್ಷೋಘ್ನ ಪಾರಾಯಣ ಹೋಮ ಕಲಶ ಸ್ಥಾಪನೆಯೊಂದಿಗೆ ಶುಭ ಮೂಹೂರ್ತದಲ್ಲಿ ಶ್ರೀ ಅಶ್ವತ್ಥ ವೃಕ್ಷಕ್ಕೆ ಸೂತ್ರಪ್ರಧಾನ ಕಾರ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ನೆರವೇರಿಸಲಾಯಿತು.
ಇದೇ ವೇಳೆ ಶ್ರೀ ಶಂಕರ ಮತ್ತು ಶ್ರೀ ನಾರಾಯಣ ದೇವರುಗಳಲ್ಲಿ ಕ್ಷೀರಾಭಿಷೇಕ -ಫಲ ಪಂಚಾಮೃತಾಭಿಷೇಕ – ರುದ್ರಾಭಿಷೇಕ- ಶ್ರೀ ಸೂಕ್ತ-ಪುರುಷಸೂಕ್ತ ಜಪ ತುಳಸೀ ಅಷ್ಟೋತ್ತರ ಅರ್ಚನೆ – ಕುಂಕುಮಾರ್ಚನೆ ಗೈಯಲಾಯಿತು. ನಂತರ ಪ.ಪೂ. ಶ್ರೀಗಳ ಪಾದುಕಾ ಪೂಜೆಯನ್ನು ದೇವಳದ ಗೌರವ ಅರ್ಚಕ ಗೋಪಾಲ ಹೆಗಡೆ ದಂಪತಿಗಳು, ರಾಘವ ಹೆಗಡೆ ದಂಪತಿಗಳು, ಶ್ರೀಧರ ಹೆಗಡೆ ದಂಪತಿಗಳು ಸಾಮೂಹಿಕವಾಗಿ ನಡೆಸಿಕೊಟ್ಟರು.
ಸೋಂದಾ ಜಾಗೃತ ವೇದಿಕೆ ಸಂಘಟಿಸಿದ್ದ ಈ ಬ್ರಹ್ಮೋಪದೇಶ ಕಾರ್ಯಕ್ರಮಕ್ಕೆ ಸೋಂದಾ ಕಸಬಾ ಮಾತೃ ಮಂಡಳಿ ಶ್ರೀ ರಾಜರಾಜೇಶ್ವರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಸೋಂದಾ ಶ್ರೀ ಶಂಕರ-ನಾರಾಯಣ ಸ್ವ ಸಹಾಯ ಸಂಘದ ಸದಸ್ಯರು ಕೈಜೋಡಿಸಿದ್ದರು.
ಕಾರ್ಯಕ್ರಮದ ಬಗೆಗೆ 82 ವರ್ಷದ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸ ಬಾಲಚಂದ್ರ ಶಾಸ್ತ್ರಿ ಹುಲದೇವನಸರ ಮಾತನಾಡಿ,ನನ್ನ 26 ನೇ ವರ್ಷದಿಂದ ಪ್ರಾರಂಭಿಸಿ ಈವರೆಗೆ 32 ಅಶ್ವತ್ಥ ಉಪನಯನ ಮಾಡಿಸಿದ್ದೇನೆ. ಅದರೆ ಶ್ರೀ ಶಂಕರ – ನಾರಾಯಣ ದೇವಳದಲ್ಲಿ ಸಂಪನ್ನಗೊಂಡ ಶ್ರೀ ಅಶ್ವತ್ಥ ಬ್ರಹ್ಮೋಪದೇಶ ನನ್ನ ವೈದಿಕ ವೃತ್ತಿ ಜೀವನದ ಅಮೃತ ಕ್ಷಣ ಪೂಜ್ಯ ಯತಿಗಳೊಬ್ಬರು ಸಸ್ಯಾರೋಪಣ ಮಾಡಿದ ಅಶ್ವತ್ಥ ವೃಕ್ಷಕ್ಕೆ ಅವರೇ ಬ್ರಹ್ಮೋಪದೇಶ ನೀಡಲು ದಿವ್ಯ ಸಾನ್ನಿಧ್ಯ ಹಾಗೂ ಮಾರ್ಗದರ್ಶನ ಮಾಡುತ್ತಿರುವದು. ಅಂತಹ ಪುಣ್ಯತಮ ವೃಕ್ಷಕ್ಕೆ ಬ್ರಹ್ಮೋಪದೇಶ ಮಾಡಿಸುವ ಸುವರ್ಣ ಅವಕಾಶ ನನ್ನ ಪಾಲಿಗೆ ದೊರಕಿದ್ದು ಪ.ಪೂ. ಶ್ರೀಗಳ ಅನುಗ್ರಹ ಹಾಗೂ ನನ್ನ ಪೂರ್ವಜರ ಪುಣ್ಯದ ಫಲ ಎಂದು ಅಭಿಪ್ರಾಯಪಟ್ಟರು.