Slide
Slide
Slide
previous arrow
next arrow

ಕೆ.ಆರ್.ಹೆಗಡೆ ದೇವಿಸರ ರಚಿತ ಕೃತಿ ಲೋಕಾರ್ಪಣೆ

300x250 AD

ಶಿರಸಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲ್ಲೂಕು ಘಟಕದ ಆಶ್ರಯದಲ್ಲಿ ಕೆ.ಆರ್.ಹೆಗಡೆ ದೇವಿಸರ ಅವರ ‘ಊರು ಇತಿಹಾಸ ಹಾಗೂ ಇತರ ಚಿಂತನ ಲೇಖನಗಳು’ ಕೃತಿಯ ಲೋಕಾರ್ಪಣಾ ಕಾರ್ಯಕ್ರಮ ನಡೆಯಿತು.

ಈ ವೇಳೆ ಮಾತನಾಡಿದ ಅರ್ಥದಾರಿ ವರ್ಗಾಸರ ಗಣಪತಿ ಭಟ್ಟ, ಬರಹವೆಂದರೆ ನಿವೃತ್ತಿಯ ನಂತರದ ಪುನರ್ಜನ್ಮ. ಸಮತೋಲನದ ರೀತಿಯಲ್ಲಿ ನೈಜತೆಯೊಂದಿಗೆ ಕೃತಿ ಲೋಕಾರ್ಪಣವಾಗಿದೆ. ಕೃತಿಕಾರರು ಮೊದಲಿನಿಂದಲೂ ನನಗೆ ಸಾಹಿತ್ಯಿಕವಾಗಿ, ಆತ್ಮೀಯವಾಗಿ ಪರಿಚಿತರು. ಅವರು ತಮ್ಮ ಬಹುಮುಖ ವ್ಯಕ್ತಿತ್ವದಿಂದ, ಸಮಾಜಮುಖಿ ಚಿಂತನೆಯಿಂದ ಗುರುತಿಸಿಕೊಂಡವರು. ಅವರ ಈ ಸಮಗ್ರ ಕೃತಿಯು ಸತ್ಯಕ್ಕೆ ಹತ್ತಿರವಾದ ಸಂಗತಿಗಳಿರುವ ಮಾಹಿತಿಯನ್ನು ಒಳಗೊಂಡಿದ್ದು ಒಂದು ಸಾಂಬಾರು ಬಟ್ಟಲೆಂದು ಹೇಳಬಹುದು. ಇಲ್ಲಿ ಅವರ ಶ್ರಮವಿದೆ, ಪರಿಶ್ರಮವಿದೆ ಎಂದರು.

ಕೃತಿ ಪರಿಚಯ ಮಾಡಿದ ವಿಮರ್ಶಕ ಸುಬ್ರಾಯ ಮತ್ತೀಹಳ್ಳಿ, ಸಭೆಯನ್ನು ಮೀರಿದ, ಸಭೆಗೆ ತಿಳಿಯದ ಕೃತಿ ಪರಿಚಯವಾಗಬೇಕು. ಹಿರಿಯ ಬರಹಗಾರರು ತಮ್ಮ ಡೈರಿಯಲ್ಲಿ ದಾಖಲಿಸಿಕೊಂಡ ವಿಷಯಗಳೇ ಮುಂದೆ ಕಾದಂಬರಿಗಳಾದವು. ನಮ್ಮ ಮನೆಯ ಇತಿಹಾಸವನ್ನೇ ಮರೆತ ಮಹಾ ಮುಗ್ಧರು ನಾವು. ಕೇವಲ ಮಾತಿನ ಮಲ್ಲರಾಗಿ, ಹರಟೆಯಲ್ಲಿ ಕಳೆದು ಹೋಗುತ್ತಿದ್ದಾರೆನ್ನುವದು ವಿಷಾದನೀಯ. ಪ್ರತಿಯೊಂದು ಕುಟುಂಬದ ಪೂರ್ವಜರ  ಒಂದು ಭಾಗವಾಗಿ ವಂಶವೃಕ್ಷಗಳನ್ನು ಸಿದ್ಧಪಡಿಸಬೇಕು. ಅದು ಮುಂದಿನ ಸಂತತಿಗೆ ಅನುಕೂಲ. ಊರು ಇತಿಹಾಸ ಹಾಗೂ ಇತರ ಚಿಂತನ ಲೇಖನಗಳು ವಾಸ್ತವಿಕತೆಗೆ ತೆರೆದಿಟ್ಟ ಕನ್ನಡಿಯಾಗಿದೆ. ಸಿದ್ದಾಪುರದಲ್ಲಿ ನಡೆದ ಕರ ನಿರಾಕರಣೆಯಲ್ಲಿ ಮಹಿಳೆಯರು 21 ದಿನಗಳ ಉಪವಾಸ ಸತ್ಯಾಗ್ರಹ ಅತ್ಯಂತ ರೋಚಕತೆಯಿಂದ ಕೂಡಿದ್ದು, ಸುಂದರ ಪರಿಸರದ ಸಮಗ್ರ ಚಿತ್ರಣವಿದೆ ಎಂದರು.

ಅಧ್ಯಕ್ಷೀಯ ಭಾಷಣದಲ್ಲಿ ಪ್ರೊ.ಕೆ.ಎನ್.ಹೊಸ್ಮನಿ, ಇದು ಒಳ್ಳೆಯ ಕೃತಿ. ಒಳ್ಳೆಯದಲ್ಲದ ಸಾಹಿತ್ಯ ಎಂಬುದು ವಿಮರ್ಶಕರಿಗೆ ಬಿಟ್ಟ ವಿಚಾರವಾಗಿದೆ. ಸಾಹಿತ್ಯದ ಗುಣವೆಂದರೆ ನವ ಚೈತನ್ಯವನ್ನು ನೀಡುವಂತಿರಬೇಕು. ಜೀವನಾನುಭವವೇ ನಿಜವಾದ ಸಾಹಿತ್ಯ. ಇತಿಹಾಸ ಬರೆದು ಇತಿಹಾಸ ನಿರ್ಮಿಸೋಣ ಎಂದರು.

300x250 AD

ಕಾರ್ಯಕ್ರಮದ ಪ್ರಾರಂಭದಲ್ಲಿ ಗಂಗಾಬಾಯಿ ಹೆಗಡೆ ದೇವಿಸರ, ವಾಣಿ ಹೆಗಡೆ, ರಾಮಕೃಷ್ಣ ಹೆಗಡೆ ಅವರಿಂದ ಗಣಪತಿ ಸ್ತುತಿಯೊಂದಿಗೆ ಸ್ವಾಗತ ಗೀತೆಯನ್ನು ಪ್ರಸ್ತುತಪಡಿಸಿದರು. ಕೃತಿಕಾರರಾದ ಕೆ.ಆರ್.ಹೆಗಡೆ ದೇವಿಸರ ಎಲ್ಲರನ್ನು ಪರಿಚಯಿಸಿ, ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯ ಮೇಲಿರುವ ಗಣ್ಯರಿಂದ ದೀಪವನ್ನು ವಿದ್ಯುಕ್ತವಾಗಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಇದೇ ಸಂದರ್ಭದಲ್ಲಿ ಕುಟುಂಬದವರಿಂದ ಸಹಾಯಕರಾದ ಈಶ್ವರ ನಾರಾಯಣ ಗೌಡರಿಗೆ ‘ಶ್ರಮವೀರ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪಾರ್ವತಿ ಚಂದ್ರಶೇಖರ ಆಚಾರಿ ಅವರನ್ನು ಸನ್ಮಾನಿಸಲಾಯಿತು.
ಕಸಾಪ ಅಧ್ಯಕ್ಷ ಜಿ.ಸುಬ್ರಾಯ ಭಟ್ಟ ಬಕ್ಕಳ ಉಪಸ್ಥಿತರಿದ್ದರು. ಪ್ರೊ.ಡಿ.ಎಮ್.ಭಟ್ ಕುಳವೆ ವಂದಿಸಿದರು. ಕೃಷ್ಣ ಪದಕಿ ಕಾರ್ಯಕ್ರಮದಲ್ಲಿ ಸಮಯದ ಅವಕಾಶವನ್ನು ಬಳಸಿಕೊಂಡು ಕೃತಿಕಾರನ ಕುರಿತು ತಾವೇ ರಚಿಸಿರುವ ಮುಕ್ತಕಗಳನ್ನು ಪ್ರಸ್ತುತಪಡಿಸುತ್ತ ಅತ್ಯಂತ ಕಲಾತ್ಮಕವಾಗಿ ಕಾರ್ಯಕ್ರಮ ನಿರೂಪಿಸಿ ಯಶಸ್ಸಿಗೆ ಕಾರಣರಾದರು.

Share This
300x250 AD
300x250 AD
300x250 AD
Back to top