• Slide
    Slide
    Slide
    previous arrow
    next arrow
  • ಜೂ.20ಕ್ಕೆ ಮಂಜುಗುಣಿಯಲ್ಲಿ ‘ಬೊಗಸೆ ಭತ್ತ ಬೀಜ ಪ್ರದಾನ’ ಕಾರ್ಯಕ್ರಮ

    300x250 AD

    ಶಿರಸಿ: ಕೃಷಿ ಪ್ರಯೋಗ ಪರಿವಾರ (ರಿ), ಶ್ರೀ ಕ್ಷೇತ್ರ ಮಂಜುಗುಣಿ ಶ್ರೀ ವೆಂಕಟರಮಣ ದೇವಸ್ಥಾನ ಇವರ ಸಂಯುಕ್ತ ಯೋಜನೆಯಲ್ಲಿ ತಾಲೂಕಿನ ಶ್ರೀ ಕ್ಷೇತ್ರ ಮಂಜುಗುಣಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ
    ‘ಬೊಗಸೆ ಭತ್ತ ಬೀಜ ಪ್ರದಾನ’ ಕಾರ್ಯಕ್ರಮವು ಜೂ.20, ಮಂಗಳವಾರದಂದು ಮಧ್ಯಾಹ್ನ 3.00ಗಂಟೆಗೆ ನಡೆಯಲಿದೆ.

    ಭಾರತೀಯ ಕೃಷಿ ಪರಂಪರೆಯಲ್ಲಿ ಆಹಾರ ಧಾನ್ಯಗಳ ಬೆಳೆ ಅತ್ಯಂತ ಮಹತ್ವದ್ದು. ಅದರಲ್ಲಿಯೂ ವಿಶೇಷವಾಗಿ ಭತ್ತ ನಮ್ಮ ದೇಶದ ಅತ್ಯಂತ ಪ್ರಮುಖ ಆಹಾರ ಬೆಳೆ. ನಮ್ಮ ದೇಶದಲ್ಲಿ ಹತ್ತಾರು ಸಾವಿರ ಭತ್ತದ ತಳಿಗಳನ್ನು ರೈತರು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದರು. ಪ್ರತಿಯೊಂದೂ ತಳಿಯದ್ದು ಒಂದೊಂದು ವಿಶೇಷತೆ. ಆಧುನಿಕ ಕೃಷಿಯ ಭರಾಟೆಯಲ್ಲಿ ಇವುಗಳಲ್ಲಿ ಬಹುತೇಕ ತಳಿಗಳು ಕಣ್ಮರೆಯಾಗಿ ಹೋಗಿವೆ. ಆದರೂ ಅಲ್ಲಲ್ಲಿ ಕೆಲವು ರೈತರು ತಮ್ಮ ಸ್ವಂತ ಆಸಕ್ತಿಯಿಂದ ಭತ್ತದ ಪಾರಂಪರಿಕ ದೇಸೀ ತಳಿಗಳನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಇನ್ನೂ ಹಲವು ರೈತರಿಗೆ ಭತ್ತದ ತಳಿ ಉಳಿಸುವ ಆಸಕ್ತಿ ಇದ್ದರೂ ಬೀಜಗಳು ಎಲ್ಲಿ ಸಿಗುತ್ತವೆಂಬ ಮಾಹಿತಿ ಇಲ್ಲ. ಈ ಹಿನ್ನೆಲೆಯಲ್ಲಿ ಭತ್ತದ ತಳಿಗಳ ವೈವಿಧ್ಯ ಸಂರಕ್ಷಣೆಯನ್ನು ಮಾಡುವ ಉದ್ದೇಶದಿಂದ ಕೃಷಿ ಪ್ರಯೋಗ ಪರಿವಾರ ವಿಶಿಷ್ಠ ಯೋಜನೆಯೊಂದನ್ನು ರೂಪಿಸಿದೆ.
    ಉಡುಪಿ ಶ್ರೀಕೃಷ್ಣ ಮಠದಲ್ಲಿ 2026 ರಿಂದ ಪ್ರಾರಂಭವಾಗುವ ಶ್ರೀ ಸೋದೆ ವಾದಿರಾಜ ಮಠದ ಪರ್ಯಾಯದ ಸಂದರ್ಭದಲ್ಲಿ ಅನ್ನಬ್ರಹ್ಮನೆಂದೇ ಪೂಜಿಸಲ್ಪಡುವ ಉಡುಪಿ ಶ್ರೀಕೃಷ್ಣನಿಗೆ ಪ್ರತಿನಿತ್ಯವೂ ಒಂದೊಂದು ಪ್ರತ್ಯೇಕ ತಳಿಯ ಭತ್ತದಿಂದ ಮಾಡಿದ ಅಕ್ಕಿಯ ಅನ್ನದ ಮಹಾ ನೈವೇದ್ಯ ಸಮರ್ಪಿಸುವುದು ಈ ಯೋಜನೆ.

    ಕಳೆದ ವರ್ಷ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಹಾದಿಗಲ್ಲು ಊರಿನಲ್ಲಿರುವ ಶ್ರೀ ಅಭಯ ಲಕ್ಷ್ಮಿ ನೃಸಿಂಹ ದೇವಸ್ಥಾನದಲ್ಲಿ ನಡೆದ ಪ್ರಥಮ ಬೊಗಸೆ ಭತ್ತ ಬೀಜ ಪ್ರದಾನ’ ಕಾರ್ಯಕ್ರಮದಲ್ಲಿ ಭೀಮನಕಟ್ಟೆ ಮಠದ ಪೂಜ್ಯ ಶ್ರೀಗಳು ಪಾಲ್ಗೊಂಡು ಆಸಕ್ತ ರೈತರಿಗೆ ಭತ್ತದ ಬೀಜವನ್ನು ನೀಡಿದ್ದಾರೆ.
    ನೀಡಿದ ಬೀಜದಿಂದ ಭತ್ತದ ಬೆಳೆ ಬಂದಾಗ ನಡೆದ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಸ್ವಯಂ ಸೋದೆ ಮಠದ ಪೂಜ್ಯ ಶ್ರೀಗಳು ಪಾಲ್ಗೊಂಡು ಈ ಯೋಜನೆಗೆ “ಶುದ್ಧ ನೈವೇದ್ಯ ಸಮರ್ಪಣಂ” ಎಂಬ ಹೆಸರನ್ನೂ ಅವರೇ ಸೂಚಿಸಿ ತಮ್ಮ ಪೂರ್ಣ ಸಹಕಾರವನ್ನು ನೀಡುವುದಾಗಿ ಆಶೀರ್ವದಿಸಿರುತ್ತಾರೆ.

    300x250 AD

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇ.ಮೂ. ಶ್ರೀನಿವಾಸ ಭಟ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೃಷಿ ಪ್ರಯೋಗ ಪರಿವಾರದ ನಿರ್ವಾಹಕ ವಿಶ್ವಸ್ಥ ದಿನೇಶ್ ಬಿ.ಎಸ್, ತಳಿ ಸಂರಕ್ಷಕ ಆರ್.ಜಿ.ಭಟ್, ಹಾಗೂ‌ ಕೇಶವ ಮರಾಠೆ ಉಪಸ್ಥಿತರಿರಲಿದ್ದಾರೆ.

    ಆದ್ದರಿಂದ  ಭತ್ತದ ವೈವಿಧ್ಯ ಉಳಿಸುವ ಈ ಮಹತ್ವದ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ, ಭತ್ತದ ಬೀಜವನ್ನು ಪಡೆದು, ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಸಿ ಉಳಿಸಬೇಕೆಂದು ಹಾಗೂ ಬರುವಾಗ ಈಗ ಬೆಳೆಯುತ್ತಿರುವ ಭತ್ತದ ಸ್ವಲ್ಪ ಪ್ರಮಾಣ ಬೀಜವನ್ನು ವಿನಿಮಯಕ್ಕಾಗಿ ತರಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಹೆಚ್ಚಿನ ಮಾಹಿತಿಗಾಗಿ ಶ್ರೀಧರ ಕಳವೆ – Tel:+919481988078, ರಾಘವ ಹೆಗಡೆ – Tel:+919632957126 ಸಂಪರ್ಕಿಸಲು ಕೋರಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top