ಅಂಕೋಲಾ: ತಾಲೂಕಿನ ಹೊನ್ನಳ್ಳಿ ಗ್ರಾಮದ ವೃಕ್ಷಮಾತೆ ಖ್ಯಾತಿಯ ಪದ್ಮಶ್ರೀ ತುಳಸಿ ಗೌಡರಿಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ.
ಸಾವಿರಾರು ಎಕರೆ ಪ್ರದೇಶದಲ್ಲಿ ಮರಗಳನ್ನು ನೆಟ್ಟು ಹಸಿರೀಕರಣ ಮಾಡುವ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸಿರುವ ತುಳಸಿ ಗೌಡ ತಮ್ಮ ಸಾಧನೆಗೆ ಪದ್ಮಶ್ರೀ ಪ್ರಶಸ್ತಿಯಿಂದ ಈಗಾಗಲೇ ಪುರಸ್ಕೃತರಾಗಿದ್ದು ಇದೀಗ ಧಾರವಾಡದಲ್ಲಿ ನಡೆದ ಕೃಷಿ ವಿಶ್ವವಿದ್ಯಾಲಯದ 36 ನೇ ಘಟಿಕೋತ್ಸವದಲ್ಲಿ ರಾಜ್ಯದ ರಾಜ್ಯಪಾಲ ಹಾಗೂ ವಿಶ್ವ ವಿದ್ಯಾಲಯದ ಕುಲಪತಿ ಥಾವರಚಂದ ಗೆಹ್ಲೊಟ್ ಪದ್ಮಶ್ರೀ ತುಳಸಿ ಗೌಡ ಅವರಿಗೆ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
ಪರಿಸರ ಸಂರಕ್ಷಣೆ ಜೊತೆಗೆ ಕೃಷಿ ಕ್ಷೇತ್ರದಲ್ಲಿನ ಅವರ ಕೊಡುಗೆ ಗುರುತಿಸಿ ಡಾಕ್ಟರೇಟ್ ನೀಡಲಾಗಿದ್ದು ತುಳಸಿ ಗೌಡ ಅವರ ಜೊತೆಗೆ ಕೃಷಿ ಉಪಕರಣಗಳ ಸಂಶೋದಕ ಪದ್ಮಶ್ರೀ ಅಬ್ದುಲ್ ಖಾದಿರ್ ನಡಿಕಟ್ಟನ್ ಅವರಿಗೆ ಸಹ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.
ತುಳಸಿ ಗೌಡ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಿರುವುದು ಅಂಕೋಲಿಗರ ಹರ್ಷಕ್ಕೆ ಕಾರಣವಾಗಿದೆ.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸಂತಸ ವ್ಯಕ್ತಪಡಿಸಿ ಜಿಲ್ಲೆಯ ಹಾಲಕ್ಕಿ ಸಮಾಜದ ಮಹಿಳೆ ತುಳಸಿ ಗೌಡ ಅವರಿಗೆ ಪ್ರತಿಷ್ಠಿತ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ ನೀಡಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ.
ಕಾರವಾರ ಅಂಕೋಲಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ತುಳಸಿ ಗೌಡ ಅವರಿಗೆ ಡಾಕ್ಟರೇಟ್ ಪದವಿ ದೊರಕಿರುವ ಕುರಿತು ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದು ಸಸ್ಯ ಪಾಲನೆ,ಪೋಷಣೆಗೆ ಬದುಕನ್ನು ಮುಡುಪಾಗಿಟ್ಟ ತುಳಸಿ ಗೌಡ ನಮ್ಮ ಪರಿಸರ ವ್ಯವಸ್ಥೆ ಮತ್ತು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು ಕೃಷಿ ವಿಶ್ವವಿದ್ಯಾಲಯ ಡಾಕ್ಟರೇಟ್ ಪಡೆದು ನಾಡಿಗೆ ಕೀರ್ತಿ ತಂದಿದ್ದಾರೆ ಎಂದರು.
ಉತ್ತರ ಕನ್ನಡ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ವತಿಯಿಂದ ಜಿಲ್ಲಾಧ್ಯಕ್ಷ ಹನುಮಂತ ಗೌಡ, ತಾಲೂಕಿನ ಹಾಲಕ್ಕಿ ಸಮಾಜದ ಪ್ರಮುಖರು ತುಳಸಜ್ಜಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.