ದಾಂಡೇಲಿ: ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹಳಿಯಾಳ-ದಾಂಡೇಲಿ ತಾಲ್ಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದ ದಾಂಡೇಲಿಯ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯ ವಿದ್ಯಾರ್ಥಿ ಆವೇಸ್ ಹಸನ್ ಮುಜಾವರ್ ಈತನು ಮರು ಮೌಲ್ಯಮಾಪನದಲ್ಲಿ 2 ಅಂಕಗಳನ್ನು ಹೆಚ್ಚಿಸಿಕೊಂಡು ಹಳಿಯಾಳ-ದಾಂಡೇಲಿ ತಾಲ್ಲೂಕಿಗೆ ಪ್ರಥಮ ಸ್ಥಾನವನ್ನು ತನ್ನದಾಗಿಸಿ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಗೆ ಮತ್ತು ದಾಂಡೇಲಿಗೆ ಕೀರ್ತಿ ತಂದಿದ್ದಾನೆ.
ಈ ಹಿಂದೆ 619 ಅಂಕಗಳನ್ನು ಪಡೆದುಕೊಂಡಿದ್ದ ಆವೇಸ್ ಹಸನ್ ಮುಜಾವರ್ ಈತನಿಗೆ ಮರು ಮೌಲ್ಯಮಾಪನದಲ್ಲಿ ವಿಜ್ಞಾನ ವಿಷಯಕ್ಕೆ 2 ಅಂಕಗಳು ಹೆಚ್ಚಾಗುವುದರೊಂದಿಗೆ ಒಟ್ಟು ಪಡೆದ ಅಂಕಗಳು 621 ಆಗಿದ್ದು, ಶೇ: 99.40 ಫಲಿತಾಂಶವನ್ನು ಪಡೆದುಕೊಂಡಿದ್ದಾನೆ.
ಈತ ನಗರ ಸಭಾ ಸದಸ್ಯ ಆಸೀಪ್ ಮುಜಾವರ್ ಮತ್ತು ಶಿಕ್ಷಕಿ ನಾಝೀಯಾ ದಂಪತಿಗಳ ಸುಪುತ್ರನಾಗಿದ್ದಾನೆ. ಈತನ ಸಾಧನೆಗೆ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯ ಶಿಕ್ಷಕ ವೃಂದ, ಬೋಧಕೇತರ ವೃಂದ, ಶಾಲಾಭಿವೃದ್ಧಿ ಸಮಿತಿ ಮತ್ತು ನಗರದ ಗಣ್ಯರನೇಕರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.