ದಾಂಡೇಲಿ: ನಗರದ ಹಳೆದಾಂಡೇಲಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯ ಜೀವ ಉಳಿಸಿದ ನಗರ ಪೊಲೀಸ್ ಠಾಣೆಯ ಪಿಎಸೈ ಐ.ಆರ್.ಗಡ್ಡೇಕರ್ ಮತ್ತು ಪೊಲೀಸ್ ಸಿಬ್ಬಂದಿಗಳಾದ ಮಂಜುನಾಥ ದೇಮಟ್ಟಿ ಹಾಗೂ ಸಿದ್ರಾಮ ರಾಮರಥ ಅವರಿಗೆ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದಿಂದ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಬಂದಂ, ಆತ್ಮಹತ್ಯೆಗೆ ಯತ್ನಿಸಿ, ಜೀವನ್ಮರಣ ಹೋರಾಟದಲ್ಲಿದ್ದ ಮಹಿಳೆಯನ್ನು ಉಪಚರಿಸಿ, ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸುವ ಮೂಲಕ ಜೀವವನ್ನು ಉಳಿಸುವ ಮಹೋನ್ನತ ಕಾರ್ಯವನ್ನು ಪೊಲೀಸರು ಮಾಡಿದ್ದಾರೆ. ತಬ್ಬಲಿಯಾಗಬೇಕಾದ ಮಕ್ಕಳಿಬ್ಬರಿಗೆ ಮರಳಿ ತಾಯಿಯನ್ನು ನೀಡಿದ ಪುಣ್ಯ ಕಾರ್ಯ ಮಾಡಿದ್ದಾರೆ. ಈ ಕಾರ್ಯವನ್ನು ಅಭಿನಂದಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಈ ಹಿನ್ನಲೆಯಲ್ಲಿ ನಾವು ಅತ್ಯಂತ ಗೌರವದಿಂದ ಈ ಮೂವರು ಸಾಧಕರನ್ನು ಸನ್ಮಾನಿಸುತ್ತಿದ್ದೇವೆ ಎಂದರು.
ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಮಂಜುನಾಥ್ ದೇಮಟ್ಟಿ ಮತ್ತು ಸಿದ್ರಾಮ ರಾಮರಥ, ಪಿಎಸೈಯವರ ಆದೇಶ ಮತ್ತು ಮಾರ್ಗದರ್ಶನದಂತೆ ಕಾರ್ಯನಿರ್ವಹಿಸಿದ್ದೇವೆ. ಮಹಿಳೆ ಜೀವಂತ ಉಳಿದಿರುವುದು ನಮಗೆ ಅತ್ಯಂತ ಸಂತಸವನ್ನು ತಂದುಕೊಟ್ಟಿದೆ. ಯಾರು ಸಹ ಇಂತಹ ಕೃತ್ಯಕ್ಕೆ ಒಳಗಾಗಬಾರದು. ನಮ್ಮ ಹಿಂದೆ ಮತ್ತು ಮುಂದೆ ನಮ್ಮನ್ನು ಅವಲಂಬಿತರು ಇದ್ದಾರೆ ಎನ್ನುವುದನ್ನು ಅರಿತು ನಡೆದುಕೊಳ್ಳಬೇಕೆಂದು ಕರೆ ನೀಡಿದರು.
ಪಿಎಸೈ ಐ.ಆರ್.ಗಡ್ಡೇಕರ್, ರೇಣುಕಾ ಬಂದಂ ಅವರು ಅನಾಮಧೇಯ ಕರೆ ಎಂದು ಸುಮ್ಮನಾಗಿದ್ದರೆ ಒಂದು ಮಹಿಳೆ ಸಾವನ್ನಪ್ಪುತ್ತಿದ್ದಳು. ಆಕೆಯ ಪುಟ್ಟ ಮಕ್ಕಳು ತಾಯಿ ಪ್ರೀತಿಯಿಂದ ವಂಚಿತರಾಗಿ ತಬ್ಬಲಿಗಳಾಗುತ್ತಿದ್ದರು. ನಾವು ಜನರ ಸಮಸ್ಯೆಗಳಿಗೆ ಹಾಗೂ ತೊಂದರೆಯಾದಾಗ ತಕ್ಷಣವೇ ಸ್ಪಂದಿಸುವ ಕಾರ್ಯ ಮಾಡುತ್ತಲೆ ಬರುತ್ತಿದ್ದೇವೆ. ಅದು ನಮ್ಮ ಕರ್ತವ್ಯವೂ ಹೌದು. ಈ ರೀತಿ ಅನಾಮಧೇಯ ಕರೆ ಬಂದಾಗ ಅದನ್ನೂ ಯಾರು ತಳ್ಳಿ ಹಾಕಬೇಡಿ, ಇಲಾಖೆಯ ಗಮನಕ್ಕೆ ತನ್ನಿ ಎಂದು ಹೇಳಿ ಸನ್ಮಾನಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ತನಿಖಾ ವಿಭಾಗದ ಪಿಎಸೈ ಪಿ.ಬಿ.ಕೊಣ್ಣೂರು ಹಾಗೂ ಪೊಲೀಸ್ ಸಿಬ್ಬಂದಿಗಳು ಮತ್ತು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.