Slide
Slide
Slide
previous arrow
next arrow

ಹೆದ್ದಾರಿ ಕಾಮಗಾರಿ ಅಪೂರ್ಣ: ಐ.ಆರ್.ಬಿ.ಯನ್ನು ತರಾಟೆಗೆ ತೆಗೆದುಕೊಂಡ ಸಚಿವ ವೈದ್ಯ

300x250 AD

ಕಾರವಾರ: ಐಆರ್.ಬಿ ಅವ್ಯವಸ್ಥೆ ವಿರುದ್ದ ನೂತನ ಸಚಿವ ಮಂಕಾಳ ವೈದ್ಯ ಅಧಿಕಾರಿಗಳ ಸಭೆಯಲ್ಲಿ ಕಿಡಿಕಾರಿದ್ದಾರೆ. ಕಾಮಗಾರಿ ಮುಗಿಸಿ ಜನರಿಗೆ ಸಮಸ್ಯೆ ಆಗುವುದನ್ನು ತಡೆಯದಿದ್ದರೆ ಟೋಲ್ ಗೇಟನ್ನೇ ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಕಾರವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳೆಗಾಲದ ಪೂರ್ವ ತಯಾರಿ ಸಭೆಯನ್ನು ಸಚಿವ ಮಂಕಾಳ ವೈದ್ಯ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಐಆರ್.ಬಿ ಅಧಿಕಾರಿಗಳನ್ನ ಸಚಿವರು ಪ್ರಶ್ನಿಸಲು ಹೋದಾಗ ಸಭೆಗೆ ಐಆರ್.ಬಿ ಹೈವೇ ಇಂಜಿನಿಯರ್ ಮಾತ್ರ ಬಂದಿದ್ದು ಅಧಿಕಾರಿಗಳು ಬರದೇ ಇರುವುದು ವೈದ್ಯರಿಗೆ ಅಸಮಾಧಾನವನ್ನುಂಟು ಮಾಡಿತ್ತು.

ಸಭೆಯಲ್ಲಿ ಜಿಲ್ಲಾಧಿಕಾರಿಗಳು ತೆಗೆದುಕೊಂಡ ನಿರ್ಣಯದಂತೆ ಎಲ್ಲವನ್ನೂ ಸರಿ ಪಡಿಸುವ ಕಾರ್ಯವನ್ನು ಐಆರ್,ಬಿ ಮಾಡುತ್ತದೆಯೇ, ಕಾಟಾಚಾರಕ್ಕೆ ಬರುವುದಾದರೆ ಯಾಕೆ ಬರಬೇಕು. ಟೋಲ್ ನಲ್ಲಿ ಹಣವನ್ನು ಸಂಗ್ರಹ ಮಾಡಿಸಿಕೊಳ್ಳಲು ಆಗುತ್ತದೆ. ಆದರೆ ಜಿಲ್ಲಾಡಳಿತ ಸಮಸ್ಯೆ ಇರುವ ಕಡೆ ಸರಿ ಪಡಿಸಿ ಅಂದರೆ ಅದನ್ನ ಅನುಷ್ಠಾನ ಮಾಡೋದಕ್ಕೆ ಯಾಕೆ ಆಗುವುದಿಲ್ಲ ಎಂದರು.

ಐಆರ್‌ಬಿ ಹೆದ್ದಾರಿ ಅಗಲೀಕರಣ ಕಾಮಗಾರಿ ಪ್ರಾರಂಭಿಸಿ 9 ವರ್ಷ ಆಗಿದೆ. ಈ ಅವಧಿಯಲ್ಲಿ ಎಷ್ಟು ಜನ ಮೃತಪಟ್ಟಿದ್ದಾರೆ. ಹೆದ್ದಾರಿಯಲ್ಲಿ ಅಪಘಾತದಲ್ಲಿ ಮೃತಪಟ್ಟಿರುವುದು ಐ.ಆರ್.ಬಿ ಮಾಡಿರುವ ಎಡವಟ್ಟಿನಿಂದಲೇ. ಆದರೆ ಐ.ಆರ್.ಬಿ ಅವರು ಮಾತ್ರ ತಮಗೆ ಯಾವುದೇ ಸಂಬಂಧ ಇಲ್ಲದಂತಿದ್ದಾರೆ. 9 ವರ್ಷ ಆದರು ಇನ್ನೂ ಕೆಲಸ ಮುಗಿಸದೇ ಇರುವುದು ದುರಂತ. ಐ.ಆರ್.ಬಿ ಕರಾರು 33 ವರ್ಷಗಳಿದ್ದು ಇನ್ನು ಅಗಲೀಕರಣ ಎಂದು 33 ವರ್ಷ ಕಾಲ ಕಳೆಯುವ ಸಾಧ್ಯತೆ ಇದೆ ಎಂದು ಸಚಿವರು ಹೇಳಿದರು.

300x250 AD

ರಸ್ತೆ ಕಾಮಗಾರಿ ಆಗಿದೆ ಎಂದು 2 ವರ್ಷಗಳಿಂದ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಶೇಕಡಾ 80 ಪರ್ಸೆಂಟ್ ಕಾಮಗಾರಿ ಮುಗಿದಿದೆ ಎಂದು ಟೋಲ್ ಸಂಗ್ರಹಿಸಲಾಗುತ್ತಿದೆ. ಆದರೆ ಉಳಿದ 20 ಪರ್ಸೆಂಟ್ ಕಾಮಗಾರಿ ಮುಗಿಸುವುದಕ್ಕೆ ನಿಗದಿತ ಸಮಯ ಇಲ್ಲವೇ. ಹೀಗೆ ಆದರೆ ಮುಂದೆ ಟೋಲ್ ಗೇಟನ್ನೇ ಬಂದ್ ಮಾಡಲಾಗುವುದು ಎಂದು ಮಂಕಾಳ ವೈದ್ಯ ಹೇಳಿದರು. ಕಾರವಾರದ ಮಾಜಾಳಿಯಿಂದ ಭಟ್ಕಳದ ಶಿರೂರಿನ ವರೆಗೆ ಒಮ್ಮೆ ಅಧಿಕಾರಿಗಳು ಹಾಗೂ ಶಾಸಕರು ವೀಕ್ಷಣೆ ಮಾಡಲಾಗುವುದು. ಎಲ್ಲೆಲ್ಲಿ ಕೆಲಸ ಬಾಕಿ ಇದೆ ಎಂದು ಗಮನಿಸಲಾಗುವುದು. ಅದನ್ನೆಲ್ಲಾ ಸರಿ ಪಡಿಸುವ ಕಾರ್ಯ ಐ.ಆರ್.ಬಿ ಮಾಡಬೇಕಾಗಿದೆ. ಭಟ್ಕಳದಲ್ಲಿ ಕಳೆದ ಬಾರಿ ದೊಡ್ಡ ಮಟ್ಟದಲ್ಲಿ ನೆರೆ ಆಗುವುದಕ್ಕೆ ಐ.ಆರ್.ಬಿ ಅವೈಜ್ಞಾನಿಕ ಕಾಮಗಾರಿಯೇ ಕಾರಣ. ಆದರೆ ಕಂಪನಿಯವರು ಒಂದು ರೂಪಾಯಿ ಪರಿಹಾರ ಕೊಡಲಿಲ್ಲ.

ಐಆರ್.ಬಿ ಹೆದ್ದಾರಿ ಅಗಲೀಕರಣ ಎಂದು ಹೊಸ ರಸ್ತೆಯನ್ನು ಮಾಡಬೇಕಿತ್ತು. ಆದರೆ ಹಣ ಮಾಡಿಕೊಳ್ಳಲು ಹಳೆಯ ರಸ್ತೆ, ಸೇತುವೆಗಳನ್ನೇ ಉಪಯೋಗಿಸಿದ ದೂರುಗಳಿದೆ. ಈ ಬಗ್ಗೆ ಪರಿಶೀಲಿಸಲಾಗುವುದು. ಎಷ್ಟು ಹಣ ಖರ್ಚಾಗಿದೆ ಎಂದು ತೋರಿಸಲಾಗಿದೆ ಎನ್ನುವುದನ್ನ ಪರಿಶೀಲಿಸಲಾಗುವುದು. ಭಟ್ಕಳದಲ್ಲಿ ಸ್ಥಳೀಯರಿಗೆ ಟೋಲ್ ಫ್ರೀ ಮಾಡಿಲ್ಲ. ಬಡ ಟ್ಯಾಕ್ಸಿ ಚಾಲಕರಿಗೆ ಟೋಲ್ ಎಂದು ದುಬಾರಿ ಹಣ ಪಡೆದು ಅವರ ಹೊಟ್ಟೆ ಮೇಲೆ ಹೊಡೆಯಲಾಗುತ್ತಿದೆ. ಬಡವರಿಗೆ ಐ.ಆರ್.ಬಿ ಹೆದ್ದಾರಿ ಅಗಲೀಕರಣ ಪ್ರಯೋಜನ ಆಗದೇ ಇದ್ದರೆ ಮತ್ತೆ ಜಿಲ್ಲೆಗೆ ಯಾತಕ್ಕಾಗಿ ರಸ್ತೆ ಅಗಲೀಕರಣಕ್ಕಾಗಿ ಬಂದಿದ್ದೀರಿ ಎಂದು ಮಂಕಾಳ ವೈದ್ಯ ಪ್ರಶ್ನಿಸಿದರು.

Share This
300x250 AD
300x250 AD
300x250 AD
Back to top