ಹಳಿಯಾಳ : ನನ್ನ ಮೇಲೆ ವಿಶ್ವಾಸವಿಟ್ಟು ಬಹುದೊಡ್ಡ ಸಮಾಜ ಸಂಘಟನೆಯ ದೊಡ್ಡ ಜವಾಬ್ದಾರಿ ನೀಡಿದ್ದು ಎಲ್ಲರು ಮೆಚ್ಚಿಸುವಂತೆ ಸಮಾಜ ಸಂಘಟನೆ ಮಾಡುವೆ. ಜವಾಬ್ದಾರಿಯಿಂದ ನಿರ್ಗಮಿಸುವವರೆಗೂ ಯಾವುದೇ ಪಕ್ಷಪಾತವಿಲ್ಲದೇ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವುದಾಗಿ ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ (ಕೆಕೆಎಮ್ ಪಿ) ನೂತನ ಜಿಲ್ಲಾಧ್ಯಕ್ಷ ಪ್ರಕಾಶ ಫಾಕ್ರಿ ಭರವಸೆ ನೀಡಿದರು.
ಮಂಗಳವಾರ ಪಟ್ಟಣದ ಮರಾಠಾ ಭವನದಲ್ಲಿ ಸಭೆ ಸೇರಿದ ಕೆಕೆಎಮ್ ಪರಿಷತ್ ಸಂಸ್ಥೆಯವರು ಹಾಗೂ ಮರಾಠಾ ಸಮಾಜ ಎಲ್ಲ ಪಕ್ಷ ಹಾಗೂ ವಿವಿಧ ಸಂಘಟನೆಯಲ್ಲಿರುವ ಮುಖಂಡರು ಹಾಗೂ ಹಿರಿಯರು ಸಮಾಜದ ಏಕೀಕರಣದ ದೃಷ್ಟಿಯಲ್ಲಿ ಪಕ್ಷಾತೀತವಾಗಿ ಸಭೆ ನಡೆಸಿದರು.
ಸಮಾಜದ ಎಲ್ಲ ಪ್ರಮುಖ ಮುಖಂಡರುಗಳ ಸಭೆಯಲ್ಲಿ ಸಮಾಜದ ಹಿರಿಯ ಮುಖಂಡ ಪ್ರಕಾಶ ಫಾಕ್ರಿ ಇವರನ್ನು ಕೆಕೆಎಮ್ ಪಿಯ ಉತ್ತರ ಕನ್ನಡ ಜಿಲ್ಲಾಧ್ಯಕ್ಷರನ್ನಾಗಿ ಮತ್ತು ಚೂಡಪ್ಪ ಬೊಬಾಟಿ ಇವರನ್ನು ಹಳಿಯಾಳ ತಾಲೂಕಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಹಾಗೂ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಆಯ್ಕೆಯನ್ನು ರಾಜ್ಯ ಉಪಾಧ್ಯಕ್ಷರಾದ ನಾಗೇಂದ್ರ ಜಿವೋಜಿ ಘೋಷಿಸಿದರು. ನಿಕಟಪೂರ್ವ ಜಿಲ್ಲಾಧ್ಯಕ್ಷ ಸಂದೀಪ ಕುಮಾರ ಬೊಬಾಟಿ ಎರಡೂ ಮುಖಂಡರುಗಳಿಗೆ ಮಾಲಾರ್ಪಣೆ ಮಾಡಿ ಶುಭಕೋರಿದರು.
ಹಳಿಯಾಳ ಕ್ಷೇತ್ರದಲ್ಲಿ ಸಿಂಹಪಾಲಿರುವ ಮರಾಠಾ ಸಮಾಜವನ್ನು ಗ್ರಾಮೀಣ ಭಾಗದಿಂದ ತಳಮಟ್ಟದಿಂದಲೇ ಸಂಘಟಿಸುವ ಮತ್ತು ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ (ಕೆಕೆಎಮ್ ಪಿ) ಅಡಿಯಲ್ಲೇ ಸಮಾಜವನ್ನು ಸಂಘಟಿಸಿ ಬೆಳೆಸುವ ನಿರ್ಣಯವನ್ನು ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ ಉತ್ತರ ಕನ್ನಡ ಜಿಲ್ಲಾ ಹಾಗೂ ಹಳಿಯಾಳ ತಾಲೂಕಾ ಘಟಕ ಕೈಗೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ನಾಗೇಂದ್ರ ಜಿವೋಜಿ ಅವರು ಮರಾಠಾ ಸಮಾಜದ ಇಂದಿನ ದುಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಹಳಿಯಾಳದಲ್ಲಿ ಸಂಘಟನೆಯು ನಡೆದುಬಂದ ಹಾದಿಯನ್ನು ಮತ್ತು ಹೆಜ್ಜೆ ಹೆಜ್ಜೆಗೂ ಎದುರಿಸಿದ ಸಮಸ್ಯೆಗಳನ್ನು ವಿವರಿಸಿದ ಅವರು ಇಂದು ಸಮಾಜದ ವಿಷಯ ಬಂದಾಗ ಪಕ್ಷ ಭೇದ ಮಾಡದೆ ಸಮಾಜಕ್ಕಾಗಿ ಪಕ್ಷಾತೀತವಾಗಿ ಒಗ್ಗಟ್ಟಾಗಿ ಕೆಲಸ ಮಾಡೊಣ ಎಂದು ಕರೆ ನೀಡಿದರು.
ಮತ್ತೊರ್ವ ಮುಖಂಡ ಸುಭಾಷ ಕೊರ್ವೆಕರ ಮಾತನಾಡಿ ಸಮಾಜದ ಒಗ್ಗೂಡುವಿಕೆಗೆ ಮತ್ತು ಸಂಘಟನೆಗಾಗಿ ತಾವು ತನು, ಮನ, ಧನದಿಂದ ಸಹಕರಿಸಲು ಸಿದ್ಧರಿದ್ದು ತಮಗೆ ಸಂಘಟನೆಯಲ್ಲಿ ಯಾವುದೇ ಸ್ಥಾನ ಮಾನ ಬೇಡ ಎಂದ ಅವರು ಸಮಾಜದ ಎಲ್ಲ ರಂಗದ ಪ್ರಮುಖರನ್ನು ಸಂಘಟನೆಯಲ್ಲಿ ಸ್ಥಾನ ನೀಡಿ ಸೇವೆ ಸಲ್ಲಿಸಲು ಪ್ರೇರೆಪಿಸಬೇಕೆಂದರು.
ಸಭೆಯಲ್ಲಿ ಪ್ರಮುಖವಾಗಿ ಇಂದು ಸಭೆಗೆ ಹಾಜರಾಗದೆ ಇರುವ ಹಾಗೂ ಸಣ್ಣಪುಟ್ಟ ಮನಸ್ತಾಪ ಇರುವ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಯಲ್ಲಿ ಸಕ್ರಿಯರಾಗಿ ಭಾಗವಹಿಸಿ ಮಾರ್ಗದರ್ಶನ ಪಡೆಯುವ ಬಗ್ಗೆ ತೀರ್ಮಾನಿಸಲಾಯಿತು ಮತ್ತು ಕ್ಷೇತ್ರದಲ್ಲಿ ನಡೆದಿರುವ ಕಾನೂನು ಬಾಹಿರವಾಗಿರುವ ಮತಾಂತರದಂತಹ ಗಂಭೀರ ಪಿಡುಗಿನ ವಿರುದ್ದ ಸಮಾಜದಲ್ಲಿ ಜಾಗೃತಿ ಮೂಡಿಸುವ ಬಗ್ಗೆ ನಿರ್ಧರಿಸಲಾಯಿತು.
ಸಮಾಜದ ಮುಖಂಡರಾದ ಮಾಜಿ ಸೈನಿಕರಾದ ಅಶೋಕ ಮಿರಾಶಿ, ಪ್ರಮುಖರಾದ ಗಣಪತಿ ಕರಂಜೇಕರ, ಶಿವಾಜಿ ನರಸಾನಿ , ಸಂತೋಷ ಮಿರಾಶಿ, ಚಂದ್ರಕಾಂತ ಕಮ್ಮಾರ, ಅನಿಲ ಚವ್ಹಾಣ, ತಾನಾಜಿ ಪಟ್ಟೆಕರ ಮಾತನಾಡಿ ಹಲವು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ರವಿ ಚಿಬ್ಬುಲಕರ, ನಾರಾಯಣ ಘಾಡೇಕರ, ತುಕಾರಾಮ ಪಟ್ಟೆಕಾರ, ಸಂಜು ಕೋಳೂರ, ಆನಂದ ಕಂಚನಾಳಕರ ಪ್ರಮುಖರು ಉಪಸ್ಥಿತರಿದ್ದರು.