ಹೊನ್ನಾವರ: ವಿದ್ಯಾರ್ಥಿಗಳ ಸಾಧನೆಗೆ ಸುತ್ತಲಿನ ಪರಿಸರ ಹಾಗೂ ಕಠಿಣ ಪರಿಶ್ರಮವು ಬಹುಮುಖ್ಯವಾಗಲಿದೆ ಎಂದು ಕುಮಟಾ ಉಪವಿಭಾಗಾಧಿಕಾರಿ ರಾಘವೇಂದ್ರ ಜಗಳಾಸರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಜಿಲ್ಲಾ ನಾಮಧಾರಿ ಸಂಘ ಮತ್ತು ನಾಮಧಾರಿ ಬ್ರದರ್ ಹುಡ್ ಸಂಘಟನೆಗಳು ಜಿಲ್ಲೆಯ ಯುವಕ-ಯುವತಿಯರ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಉಚಿತ ತರಬೇತಿ ಹಾಗೂ ಮಾರ್ಗದರ್ಶನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಸ್ಪರ್ಧಾತ್ಮಕ ಪರಿಕ್ಷೆಯನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಆತ್ಮಸೈರ್ಯ ಮೂಡಿಸಲು ಇಂತಹ ತರಬೇತಿ ಬಹುಮುಖ್ಯವಾಗಿದೆ. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಮೂಲಕ ಜ್ಞಾನಗಳಿಸಿಕೊಂಡರೆ ಸಾಧನೆ ಮಾಡಲು ಅನೂಕೂಲವಾಗಿದೆ. ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಇಂತಹ ತರಬೇತಿ ಬಹುಮುಖ್ಯ ಪಾತ್ರ ವಹಿಸಲಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಶಿಲ್ಪಾ ಎಚ್. ಆರ್. ಮಾತನಾಡಿ, ಹಣದ ಹಿಂದೆ ಹೋಗುವ ತರಬೇತಿ ಸಂಸ್ಥೆಯ ನಡುವೆ ಉಚಿತ ತರಬೇತಿ ನೀಡುವ ಸಂಘಟನೆಯ ಕಾರ್ಯ ಪ್ರಶಂಸನಾರ್ಹವಾಗಿದೆ. ನಿಮ್ಮೂರಿಗೆ ಬಂದು ಉಚಿತವಾಗಿ ಈ ಕಾರ್ಯಕ್ರಮದ ಆಯೋಜನೆಯ ಮೂಲಕ ಸಂಘಟಕರು ಜಿಲ್ಲೆಯ ಮುಂದಿನ ಪೀಳಿಗೆಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಜ್ಜಾಗಲು ಇಂತಹ ತರಬೇತಿ ಅನೂಕೂಲವಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಎಸ್.ಡಿ.ಎಂ. ಕಾಲೇಜಿನ ಪ್ರಾಚಾರ್ಯರಾದ ವಿಜಯಲಕ್ಷ್ಮೀ ನಾಯ್ಕ ಮಾತನಾಡಿ, ಪದವಿ ಮುಗಿದ ಬಳಿಕ ಇನ್ನಷ್ಟು ಜವಾಬ್ದಾರಿ ವಿದ್ಯಾರ್ಥಿಗಳ ಮೇಲೆ ಬರಲಿದ್ದು, ನಿಮ್ಮ ಎದುರಿಗೆ ಬಂದ ಈ ಅವಕಾಶ ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ತಾಲೂಕು ಆಸ್ಪತ್ರೆಯ ವೈದ್ಯ ಡಾ.ಪ್ರಕಾಶ ನಾಯ್ಕ ಮಾತನಾಡಿ, ಒಂದು ಕಾಲದಲ್ಲಿ ನಮ್ಮ ಭಾಗದಲ್ಲಿ ಪುಸ್ತಕದ ಕೊರತೆ, ಮಾಹಿತಿ ಕೊರತೆ ಇತ್ತು. ಆ ಕೊರತೆ ಇಂದಿನ ವಿದ್ಯಾರ್ಥಿಗಳು ಅನುಭವಿಸದಂತೆ ಈ ತರಬೇತಿ ಆಯೋಜನೆ ಮಾಡಿದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗಲು ತರಬೇತಿಯ ಜೊತೆಗೆ ತರಬೇತಿಯ ನಂತರವು ಸಂಘಟಕರು ನಿಮ್ಮೊಂದಿಗೆ ಇದ್ದು, ಸಲಹೆ ಮಾರ್ಗದರ್ಶನ ನೀಡುದಾಗಿ ಭರವಸೆ ನೀಡಿದರು.
ಇ.ಓ ಸುರೇಶ ನಾಯ್ಕ ಮಾತನಾಡಿ, ಸಮಾಜಮುಖಿಯಾಗಿ ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳ ಬದುಕಿಗೆ ದಾರಿಯಾಗಲಿದೆ. ನಮ್ಮ ಕುಟುಂಬ ಹಾಗೂ ಸಮಾಜಮುಖಿ ಕಾರ್ಯದಂತಹ ಗುಣವನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವರು ಹಾಗೂ ನಾಮಧಾರಿ ಸಂಘದ ಜಿಲ್ಲಾಧ್ಯಕ್ಷ ಆರ್.ಎನ್.ನಾಯ್ಕ ಮಾತನಾಡಿ, ನಮ್ಮ ಜಿಲ್ಲೆಯ ಹೆಚ್ಚಿನ ವಿದ್ಯಾರ್ಥಿಗಳು ಪದವಿ ನಂತರ ಇರುವ ಸಣ್ಣಪುಟ್ಟ ಉದ್ಯೋಗವನ್ನು ಹುಡುಕುತ್ತಿದ್ದರು. ಆದರೆ ಇಂದು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಉತ್ಸುಕರಾಗಿದ್ದರೂ, ಈ ಕುರಿತು ಮಾಹಿತಿ ಇರಲಿಲ್ಲ. ಅದನ್ನು ದೂರವಾಗಿಸಲು ಇಂದು ಈ ತರಬೇತಿ ಆಯೋಜಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ, ಜ್ಞಾನವೃದ್ಧಿಯಾಗುವುದರಿಂದ ಬದುಕಿನುದ್ದಕ್ಕೂ ಇದು ಉಪಯೋಗವಾಗಲಿದೆ. ಇಂದು ನಾವು ಎಲ್ಲಾ ಜಾತಿ ಧರ್ಮದ ವಿದ್ಯಾರ್ಥಿಗಳಿಗೆ ತರಬೇತಿ ಆಯೋಜಿಸಿದ್ದು, ಮುಂದೆ ತಾಲೂಕು ಮತ್ತು ಜಿಲ್ಲೆಗೆ ಕೀರ್ತಿ ತರುವಂತೆ ಯುವ ಸಮುದಾಯಕ್ಕೆ ಕರೆ ನೀಡಿದರು.
ಹಿರಿಯ ಪತ್ರಕರ್ತ ಜಿ.ಯು.ಭಟ್, ನಿವೃತ್ತ ಜಿಲ್ಲಾ ನ್ಯಾಯಧೀಶ ರವಿ ನಾಯ್ಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರೇರಣಾ ನುಡಿಗಳನ್ನಾಡಿದರು. ವಾಣಿಜ್ಯ ತೆರಿಗೆ ಅಧಿಕಾರಿ ಗಣೇಶ ನಾಯ್ಕ ಸ್ವಾಗತಿಸಿ ತರಬೇತಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಕಾರ್ಯಕ್ರಮದ ನಿರ್ವಹಿಸಿ ವಂದಿಸಿದರು.