ದಾಂಡೇಲಿ: 9ನೇ ಬಾರಿಗೆ ವಿಧಾನ ಸಭೆಗೆ ಆಯ್ಕೆಯಾಗಿರುವ ಆರ್.ವಿ. ದೇಶಪಾಂಡೆಯವರಿಗೆ ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಯಿತು. ನಗರದ ಬ್ಲಾಕ್ ಕಾಂಗ್ರೆಸ್, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದಲೂ ಆರ್.ವಿ.ದೇಶಪಾಂಡೆಯವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಶೇಖ ಮತ್ತು ಮೋಹನ ಹಲವಾಯಿ, ಆರ್.ವಿ. ದೇಶಪಾಂಡೆಯವರ ಐತಿಹಾಸಿಕ ಗೆಲುವಿನ ಮೂಲಕ ಕ್ಷೇತ್ರದ ಹಿರಿಮೆ ಹೆಚ್ಚಿದಂತಾಗಿದೆ. ದೇಶಪಾಂಡೆಯವರು ಮಾಡಿದ ಅಭಿವೃದ್ಧಿ ಕಾರ‍್ಯಗಳು ಸದಾ ಸ್ಮರಣೀಯ. ದೇಶಪಾಂಡೆಯವರು ಸಚಿವರಾಗಬೇಕಿತ್ತು. ಸಚಿವರಾಗದಿದ್ದರೂ ಮುಖ್ಯಮಂತ್ರಿಯವರಷ್ಟೆ ಪವರ್ ಪುಲ್ ರಾಜಕಾರಣಿಯಾಗಿ ರಾಜ್ಯದಲ್ಲಿ ಗಮನ ಸೆಳೆದಿದ್ದಾರೆ. ಈ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಚಟುವಟಿಕೆಗಳು ದೇಶಪಾಂಡೆಯವರ ನೇತೃತ್ವದಲ್ಲಿ ಶರವೇಗದಲ್ಲಿ ನಡೆಯಲಿದೆ. ಇಂತಹ ಜನಪರ ಕಾಳಜಿಯ ನಾಯಕನನ್ನು ಪಡೆದ ನಾವೆಲ್ಲರೂ ನಿಜಕ್ಕೂ ಭಾಗ್ಯವಂತರು ಎಂದರು.
ಸನ್ಮಾನ ಸ್ವೀಕರಿಸಿ, ಕೃತಜ್ಞತೆ ಸಲ್ಲಿಸಿ ಮಾತನಾಡಿದ ಆರ್.ವಿ.ದೇಶಪಾಂಡೆ, ನನ್ನ ಈ ಗೆಲುವಿನ ಶ್ರೇಯಸ್ಸು ಕ್ಷೇತ್ರದ ಮತದಾರರಿಗೆ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಹಾಗೂ ಕಾರ‍್ಯಕರ್ತರಿಗೆ ಸಲ್ಲುತ್ತದೆ. ಈಗ ಚುನಾವಣೆ ಮುಗಿದಿದೆ. ಇನ್ನೇನಿದ್ದರೂ ಅಭಿವೃದ್ಧಿ ಚಟುವಟಿಕೆಗಳ ಕಡೆಗೆ ನಮ್ಮ ಗಮನವಿರಬೇಕು. ಬ್ಲಾಕ್ ಕಾಂಗ್ರೆಸಿನ ಕಾರ‍್ಯ ಇನ್ನೂ ಮುಂದೆ ಆರಂಭವಾಗಲಿದೆ. ಕ್ಷೇತ್ರದಲ್ಲಿ ಏನೆಲ್ಲಾ ಅಭಿವೃದ್ಧಿ ಕಾರ‍್ಯಗಳು ಆಗಬೇಕು ಎನ್ನುವುದನ್ನು ಬ್ಲಾಕ್ ಕಾಂಗ್ರೆಸ್ ಸಮಿತಿ ಗಮನಕ್ಕೆ ತರುವ ಕೆಲಸ ಮಾಡಬೇಕೆ ವಿನ: ಅಧಿಕಾರಿಗಳ ವರ್ಗಾವಣೆಗೆ ವಿಶೇಷ ಆಸಕ್ತಿ ತೋರಿಸುವುದು ಅಲ್ಲ. ದಾಂಡೇಲಿ ತಾಲ್ಲೂಕಿನ ಬೇಕು ಬೇಡಗಳ ಪಟ್ಟಿ ಮಾಡಿಕೊಂಡು ನನ್ನನ್ನು ಬಿಡದೇ ಕಾಡುವ ಕೆಲಸ ಬ್ಲಾಕ್ ಕಾಂಗ್ರೆಸ್ ಸಮಿತಿಯದ್ದಾಗಿದೆ. ಎಲ್ಲರೂ ಸೇರಿ ದಾಂಡೇಲಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸೋಣ ಎಂದರು.
ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಆರ್.ಹೆಗಡೆ, ಪಕ್ಷದ ಹಿರಿಯ ಮುಖಂಡರುಗಳಾದ ಟಿ.ಆರ್.ಚಂದ್ರಶೇಖರ್, ಬಾಬಾ ಮುಲ್ಲಾ, ತಸ್ವರ್ ಸೌದಾಗರ್, ದಿವಾಕರ ನಾಯ್ಕ,ಪಕ್ಷದ ಜಿಲ್ಲಾ ವಕ್ತಾರ ಆರ್.ಪಿ.ನಾಯ್ಕ, ನಗರ ಸಭಾ ಸದಸ್ಯೆ ರುಹಿನಾ ಖತೀಬ್, ಕೆಪಿಸಿಸಿ ಸದಸ್ಯರಾದ ಕರೀಂ ಅಜ್ರೇಕರ್, ಯುವ ಕಾಂಗ್ರೆಸ್ ಅಧ್ಯಕ್ಷ ಉಸ್ಮಾನ್ ಮುನ್ನ ವಹಾಬ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇಣುಕಾ ಬಂದಂ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ಮೀನಾಕ್ಷಿ ಕನ್ಯಾಡಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸಾಧಿಕ್ ಮುಕಾಶಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ‍್ಯದರ್ಶಿ ಎಸ್.ಎಸ್. ಪೂಜಾರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕರ‍್ಯದರ್ಶಿ ಎಸ್.ಎಸ್.ಪೂಜಾರ್, ಕಾಂಗ್ರೆಸ್ ಮುಖಂಡರುಗಳಾದ ವೀರೇಶ್ ಯರಗೇರಿ, ಅವಿನಾಶ ಘೋಡ್ಕೆ, ಎಸ್.ವಿ.ಸಾವಂತ್ ಮೊದಲಾದವರು ಉಪಸ್ಥಿತರಿದ್ದರು.
ಕಾಂಗ್ರೆಸ್ ಮುಖಂಡರಾದ ಕೀರ್ತಿ ಗಾಂವಕರ್ ಅವರು ಸ್ವಾಗತಿಸಿ, ವಂದಿಸಿ, ಕಾರ‍್ಯಕ್ರಮವನ್ನು ನಿರೂಪಿಸಿದರು. ಕಾರ‍್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಪಕ್ಷದ ಚುನಾಯಿತ ಜನಪ್ರತಿನಿಧಿಗಳು ಮತ್ತು ಕಾರ‍್ಯಕರ್ತರು ಉಪಸ್ಥಿತರಿದ್ದರು.