ಕಾರವಾರ: ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಬೋಧಕ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತರಕರ್ ಜನ್ಮದಿನದ ಅಂಗವಾಗಿ ಜನಶಕ್ತಿ ವೇದಿಕೆಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಆಸ್ಪತ್ರೆಯ ಅವರ ಕೊಠಡಿಯಲ್ಲೇ ಜನಶಕ್ತಿ ವೇದಿಕೆಯ ಪದಾಧಿಕಾರಿಗಳು ತಂದಿದ್ದ ಕೇಕ್ ಕತ್ತರಿಸುವ ಮೂಲಕ ಡಾ.ಶಿವಾನಂದ ಕುಡ್ತರಕರ್ ತಮ್ಮ ಜನ್ಮದಿನವನ್ನಾಚರಿಸಿಕೊಂಡರು. ಈ ವೇಳೆ ವೇದಿಕೆಯಿಂದ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಲಾಯಿತು. ಕ್ರಿಮ್ಸ್ನ ಶುಷ್ರೂಶಕಿಯರು, ಸಿಬ್ಬಂದಿ, ವೈದ್ಯರು, ತಾಲೂಕಿನ ಗಣ್ಯರನೇಕರು ಕೂಡ ಡಾ.ಕುಡ್ತರಕರ್ ಅವರಿಗೆ ಶುಭಾಶಯ ತಿಳಿಸಿದರು. ಸನ್ಮಾನದ ಸಂದರ್ಭದಲ್ಲಿ ಡಾ.ಕುಡ್ತರಕರ್ ಅವರ ಸಾಧನೆಗಳನ್ನ ಹಾಗೂ ಜಿಲ್ಲಾ ಆಸ್ಪತ್ರೆಗೆ ಅವರ ಅವಶ್ಯಕತೆಗಳನ್ನ ನೆನೆಯಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ಎಷ್ಟೇ ವಿರೋಧ, ಎಷ್ಟೋ ಆರೋಪಗಳ ನಡುವೆಯೂ ಕುಗ್ಗದೆ ‘ವೈದ್ಯೋ ನಾರಾಯಣ ಹರಿಃ’ ಎಂಬಂತೆ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ಡಾ.ಶಿವಾನಂದ ಕುಡ್ತರಕರ್ ನಿರ್ವಹಿಸುತ್ತಿದ್ದಾರೆ. ಅದೆಷ್ಟೋ ಬಡ ರೋಗಿಗಳಿಗೆ ಬೇರೆಡೆ ತೆರಳಲು ಸಮಯಾವಕಾಶವಿರದ ವೇಳೆ, ತುರ್ತು ಸಂದರ್ಭದಲ್ಲಿ ಅಪಾಯಗಳನ್ನ ಲೆಕ್ಕಿಸಿದೆ ಶಸ್ತ್ರಚಿಕಿತ್ಸೆಗಳನ್ನ ಮಾಡಿ ಗುಣಪಡಿಸಿದ್ದಾರೆ. ಮಣಿಪಾಲ, ಮಂಗಳೂರು ಆಸ್ಪತ್ರೆಗಳಲ್ಲೂ ಆಗದೆ ವಾಪಸ್ಸು ಬಂದವರಿಗೆ, ಬದುಕುವುದೂ ಸಾಧ್ಯವಿಲ್ಲ ಎಂಬ ಪರಿಸ್ಥಿತಿಯಲ್ಲಿದ್ದಂಥವರಿಗೆ ಇವರು ಜೀವದಾನ ಮಾಡಿದ್ದಾರೆ. ಹಗಲು- ರಾತ್ರಿ, ವಿಶ್ರಾಂತಿ ಬಯಸದೇ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಶಸ್ತ್ರಚಿಕಿತ್ಸೆಗಳನ್ನ ಯಶಸ್ವಿಯಾಗಿ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
ಕೆಲವರು ಇವರನ್ನ ಕೊಲೆಗಾರ ಎಂದೂ ಆರೋಪಿಸಿದರು. ಹೀಗೆಲ್ಲ ಆರೋಪಗಳು ಎದುರಾದಾಗ ಅದೆಷ್ಟೋ ವೈದ್ಯರುಗಳು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯ ದಾರಿ ಹಿಡಿದಿರುವುದೂ ಇದೆ. ಆದರೆ ಅವರೆಲ್ಲರಿಗಿಂತ ಡಾ.ಕುಡ್ತರಕರ್ ಭಿನ್ನ. ಯಾವುದೇ ವೈದ್ಯರೂ ಒಬ್ಬ ರೋಗಿ ಸಾಯಲೆಂದು ಪ್ರಯತ್ನಪಡುವುದಿಲ್ಲ, ಬದಲಿಗೆ ಬದುಕಿಸಲು ಪ್ರಯತ್ನಿಸುತ್ತಾರೆ. ಇತ್ತೀಚಿಗಷ್ಟೇ ಬಿಪಿ- ಶುಗರ್ ಹೊಂದಿದ್ದ ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ 10 ಕೆಜಿ ಗಡ್ಡೆಯನ್ನ ಯಶಸ್ವಿಯಾಗಿ ಹೊರತೆಗೆದು ಅವರಿಗೆ ಮರುಜೀವ ನೀಡಿದ್ದಾರೆ. ವೈದ್ಯರನ್ನೆಲ್ಲ ಸೇರಿಸಿಕೊಂಡು ಒಂದು ತಂಡವಾಗಿ ಎಂಥ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನೂ ಯಶಸ್ವಿಯಾಗಿ ನಿಭಾಯಿಸುವ ಡಾ.ಕುಡ್ತರಕರ್ ಅವರು ಈ ಜಿಲ್ಲಾ ಆಸ್ಪತ್ರೆಗೆ ಎಂದಿಗೂ ಅಗತ್ಯ. ನಮ್ಮ ಸನ್ಮಾನದಿಂದ ಅವರ ಜವಾಬ್ದಾರಿಗಳನ್ನು ಇನ್ನಷ್ಟು ಹೆಚ್ಚಿಸಿದ್ದು, ಬಡವರು- ದುರ್ಬಲರ ಸೇವೆ, ಅವರ ಪರ ಕಾಳಜಿ ಹೀಗೆ ಮುಂದುವರಿಯಲಿ ಎಂದು ಹಾರೈಸಿದರು.
ಈ ವೇಳೆ ಜನಶಕ್ತಿ ವೇದಿಕೆಯ ಪ್ರಮುಖರಾದ ರಾಮ ನಾಯ್ಕ, ಬಾಬು ಶೇಖ್, ಅಲ್ತಾಫ್ ಶೇಖ್, ದೀಪಕ್ ನಾಯ್ಕ, ಸುರೇಶ್ ನಾಯ್ಕ, ರಾಜೇಂದ್ರ ಅಂಚೇಕರ್, ಶುಭಂ ಅಂಚೇಕರ್, ಸಿ.ಎನ್.ನಾಯ್ಕ, ಸೂರಜ್ ಕುರೂಮಕರ್, ರಾಕೇಶ್ ನಾಯ್ಕ, ಕ್ರಿಮ್ಸ್ ಆಸ್ಪತ್ರೆಯ ಸಿಬ್ಬಂದಿಗಳಾದ ಕಿಶನ್ ವಾರಿಕ್, ಸಂದೇಶ್ ಗುನಗಿ, ಮಯೂರ್ ತಳೇಕರ್, ವಿಘ್ನೇಶ್ ಕುಡ್ತಳಕರ್ ಮುಂತಾದವರಿದ್ದರು.