ಹೊನ್ನಾವರ: ಕಾಂಗ್ರೆಸ್ ಸರ್ಕಾರದ ಆರ್ಥಿಕ ದಿವಾಳಿತನದ ಗ್ಯಾರಂಟಿ ಯೋಜನೆಯು ಬಿಜೆಪಿಗೆ ಈ ಬಾರಿ ಹಿನ್ನಡೆಯಾದರೂ ಸಮರ್ಥ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವುದಾಗಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಪಟ್ಟಣದ ಮೂಡಗಣಪತಿ ಸಬಾಭವನದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ಮಂಡಲ ವತಿಯಿಂದ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತಾ ಕಾರ್ಯಕ್ರಮ ಹಾಗೂ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾದ ದಿನಕರ ಶೆಟ್ಟಿ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯನ್ನು ಕೈಬಿಟ್ಟರೆ, ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆಯನ್ನು ಬದಲಿಸಲು ಮುಂದಾದರೆ ಬಿಜೆಪಿ ರಾಜ್ಯಾದ್ಯಂತ ಗಟ್ಟಿಧ್ವನಿಯಲ್ಲಿ ಹೋರಾಟ ನಡೆಸಲಿದೆ. ಆರ್ಥಿಕ ಸ್ಥಿತಿಗತಿಗಳ ಪರಿವೆ ಇಲ್ಲದೇ ಕಾಂಗ್ರೆಸ್ ಪಕ್ಷ ಉಚಿತ ಯೋಜನೆಗಳ ಆಶ್ವಾಸನೆ ನೀಡಿರುವ ಪರಿಣಾಮ ರಾಜ್ಯದಲ್ಲಿ ಬಿಜೆಪಿಗೆ ಸೋಲಾಗಿದೆ. ಭಾರತೀಯ ಜನತಾ ಪಾರ್ಟಿಯ ರಾಜ್ಯ ಮತ್ತು ಕೇಂದ್ರ ಸರಕಾರದ ಜನಪರ ಯೋಜನೆಯಿಂದ ಬಿಜೆಪಿ ಗೆಲ್ಲುವ ವಿಶ್ವಾಸವಿತ್ತು, ಕಾಂಗ್ರೆಸ್‌ನ ಉಚಿತ ಯೋಜನೆ ನಿರೀಕ್ಷೆ ಮಾಡದೆ ಇರುವಂತ ಫಲಿತಾಂಶ ಬಂದಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಏನೇನು ಕೊಡುತ್ತೇನೆ ಹೇಳಿದ್ದರು ಅದನ್ನು ಕೊಡುವ ತನಕ ವಿರೋಧ ಪಕ್ಷವಾದ ನಾವು ಬಡವರ ಪರವಾಗಿ ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿ ವಿರೋಧ ಪಕ್ಷವಾಗಿ ಬಿಜೆಪಿ ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ನಾನು ಹೆಚ್ಚು ಅಭಿವೃದ್ಧಿ ಕೆಲಸ ಮಾಡಿಯೂ ಕಡಿಮೆ ಮತಗಳು ದೊರಕಿವೆ. ಇದಕ್ಕೆ ಪಕ್ಷದ ಹಲವು ಮುಖಂಡರು ಕಾರಣರಾಗಿದ್ದಾರೆ. ನನಗೆ ಎಷ್ಟೇ ನೋವಾಗಿದ್ದರೂ ನಾನು ಮುಂದೆ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ. ಪಕ್ಷವಿರೋಧಿ ಚಟುವಟಿಕೆ ಮಾಡಿದವರ ವಿರುದ್ಧ ಮಾತನಾಡುವುದನ್ನು ಇವತ್ತಿನಿಂದ ನಿಲ್ಲಿಸುತ್ತೇನೆ. ಕಾಂಗ್ರೆಸ್ ಪಕ್ಷದ ನಿವೇದಿತ್ ಆಳ್ವಾ ಚುನಾವಣೆ ಕಣದಿಂದ ಹಿಂದೆ ಸರಿದಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಹೊರತಾಗಿ ವಿರೋಧ ಪಕ್ಷದವರು ಜಾಲತಾಣದ ಮೂಲಕ ಅಪಪ್ರಚಾರ ಮಾಡಿ ಹಾದಿ ತಪ್ಪಿಸುವ ಕೆಲಸ ಮಾಡಿದ್ದರು ಎಂದು ಗೆಲುವಿಗೆ ಶ್ರಮಿಸಿದವರಿಗೆ ಅಭಿನಂದಿಸಿದರು.
ಮುಖಂಡರಾದ ಎನ್.ಎಸ್.ಹೆಗಡೆ, ನಾಗರಾಜ್ ತೊರ್ಕೆ, ಶಿವಾನಂದ ಹೆಗಡೆ ಕಡತೋಕ, ಸುಬ್ರಾಯ ದೇವಾಡಿಗ ಮಾತನಾಡಿದರು. ಮಂಡಲ ಅಧ್ಯಕ್ಷ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಮುಖಂಡರಾದ ಸುಬ್ರಾಯ ವಾಲ್ಕೆ, ನಾಗರಾಜ ನಾಯ್ಕ ತೊರ್ಕೆ, ಎನ್. ಎಸ್. ಹೆಗಡೆ ಕರ್ಕಿ, ಜಿ. ಜಿ. ಶಂಕರ, ಪ್ರಮೋದ್ ನಾಯ್ಕ, ವಿಗ್ನೇಶ್ ಹೆಗಡೆ, ಛಾಯಾ ಉಭಯಕರ್ ,ಸುಬ್ರಾಯ ನಾಯ್ಕ, ಭಾಗ್ಯ ಮೇಸ್ತ, ಪ್ರಮೋದ್ ನಾಯ್ಕ ಇದ್ದರು.