ಜೊಯಿಡಾ: ಇಲ್ಲಿನ ಜನರ ನೀರಿನ ಮೂಲವಾದ ಪಾಂಡರಿ ನದಿ ನೀರಿಲ್ಲದೇ ಬರಿದಾಗಿದ್ದು, ತಾಲೂಕಿನ ಹೃದಯ ಭಾಗವಾದ ರಾಮನಗರದಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದೆ.
ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ವರ್ಷವೂ ನೀರಿನ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಇಲ್ಲಿನ ಜನರು ದಿನವೂ ಸರಿಯಾಗಿ ನೀರು ಸಿಗದೆ ಹೈರಾಣಾಗಿದ್ದಾರೆ. ರಾಮನಗರ ಗ್ರಾಮ ಪಂಚಾಯತ ವತಿಯಿಂದ ಕುಡಿಯುವ ನೀರಿಗಾಗಿ ಜಲ ಜೀವನ ಯೋಜನೆಯಿಂದ ಮನೆ ಮನೆಗೆ ನೀರು ಒದಗಿಸುತ್ತಿದ್ದು, ಇದು ಕೇವಲ ಕುಡಿಯುವ ನೀರಿಗಾಗಿ ಮಾತ್ರ ಬಳಸಬಹುದಾಗಿದೆ. ದಿನ ಬಳಕೆಗೆ ನೀರು ವಾರಕ್ಕೊಮ್ಮೆ ಅಥವಾ ಹತ್ತು ದಿನಗಳಿಗೆ ಒಮ್ಮೆ ಸಿಗುತ್ತಿದೆ. ಹೀಗಾಗಿ ಜನರು ದಿನ ಬಳಕೆಗೆ ನೀರು ಸಿಗದೆ ಸಮಸ್ಯೆ ಎದುರಿಸುವಂತಾಗಿದೆ.
ಸೂಪಾ ಡ್ಯಾಂನಿಂದ ನೀರನ್ನು ಪೈಪ್‌ಲೈನ್ ಮೂಲಕ ರಾಮನಗರ ಭಾಗದ ಜನರಿಗೆ ಪೂರೈಸಬಹುದಾಗಿದ್ದು, ಈ ಯೋಜನೆ ಸದ್ಯದಲ್ಲೆ ನಡೆಯುವ ಹಂತದಲ್ಲಿದೆ. ಈ ಯೋಜನೆ ಜಾರಿಯಾಗಿ ರಾಮನಗರ ಭಾಗದ ಜನರಿಗೆ ನೀರು ಸಿಕ್ಕರೆ ಸೂಪಾ ಜಲಾಶಯಕ್ಕಾಗಿ ತಮ್ಮ ಮನೆ, ಜಮೀನು ತ್ಯಾಗ ಮಾಡಿದ ರಾಮನಗರ ಜನತೆಗೆ ಕನಿಷ್ಟ ಪಕ್ಷ ನೀರಾದರು ಸಿಕ್ಕಿತ್ತಲ್ಲ ಎನ್ನುವ ಸಮಾಧಾನ ಇರುತ್ತಿತ್ತು ಎನ್ನುತ್ತಾರೆ ಈ ಭಾಗದ ಜನರು.