ಕಾರವಾರ: ತಾಲೂಕಿನ ಹೆಗಡೆ ಗ್ರಾಮ ಪಂಚಾಯತ ವ್ಯಾಪ್ತಿಯ ಹೊಸ್ಕೇರಿ ಎಂಬಲ್ಲಿ ನಟ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದಿಂದ ಗ್ರಾಮೀಣ ಪ್ರದೇಶದಲ್ಲಿರೋ ಪ್ರಯಾಣಿಕರ ತಂಗುದಾಣವನ್ನು ಗ್ರಂಥಾಲಯವನ್ನಾಗಿ ಪರಿವರ್ತಿಸಲಾಗಿದೆ.
ತೀರಾ ಹಿಂದುಳಿದ ಗ್ರಾಮವಾಗಿರುವ ಹೊಸ್ಕೇರಿ ಪ್ರಯಾಣಿಕ ತಂಗುದಾಣದಲ್ಲಿ ಸುಂದರವಾಗಿರೋ, ಜನರಿಗೆ ಉಪಯುಕ್ತವಾಗೋ ರೀತಿಯಲ್ಲಿ ಗ್ರಂಥಾಲಯವನ್ನು ಮಾಡಲಾಗಿದೆ. ನಟ ಪುನೀತ್ ರಾಜಕುಮಾರ ತಮ್ಮ ಜೀವಿತ ಅವಧಿಯಲ್ಲಿ ನೂರಾರು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಅದು ಇಂದು ಅದೆಷ್ಟೋ ಜನರಿಗೆ ಮಾದರಿ ಕೂಡ ಆಗಿದೆ. ಅದೆ ರೀತಿ ಹೊಸ್ಕೇರಿ ಗ್ರಾಮದ ಹತ್ತಾರು ಯುವಕರು ಸೇರಿಕೊಂಡು ನಾವು ಕೂಡ ಪುನೀತ್ ರಾಜಕುಮಾರ ಅವರ ಅಭಿಮಾನ ಬಳಗವನ್ನ ಕಟ್ಟಿಕೊಂಡು ಅವರ ಹೆಸರಲ್ಲಿ ಏನಾದ್ರೂ ಒಂದು ಒಳ್ಳೆ ಕಾರ್ಯ ಮಾಡಬೇಕು ಎಂದು ಆಲೋಚಿಸಿ ಊರಲ್ಲಿ ಒಂದು ಗ್ರಂಥಾಲಯ ಮಾಡಬೇಕು ಎಂಬ ನಿರ್ಧಾರವನ್ನ ಆಯ್ಕೆ ಮಾಡಿಕೊಂಡ ಯುವಕರ ತಂಡ ಗ್ರಾಮ ಹಿರಿಯರ ಜೊತೆ ಚರ್ಚೆ ನಡೆಸಿ ಎಲ್ಲರ ಒಪ್ಪಿಗೆ ಪಡೆದುಕೊಂಡು ಇದೀಗ ಪ್ರಯಾಣಿಕರ ತಂಗುದಾಣದಲ್ಲಿ ಜ್ಞಾನದೇಗುಲವೆ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದಾರೆ.
ಇನ್ನು ಪ್ರತಿನಿತ್ಯ ಈ ಗ್ರಾಮದಿಂದ ಕುಮಟಾ ಪಟ್ಟಣಕ್ಕೆ ಸೇರಿದಂತೆ ಶಾಲಾ- ಕಾಲೇಜಿಗೆ ಹೋಗುವ ಪ್ರತಿಯೊಬ್ಬರೂ ಇಲ್ಲಿಗೆ ಬಂದೇ ಬಸ್ ಹತ್ತಿಕೊಂಡು ಪ್ರಯಾಣಿಸಬೇಕು. ಇನ್ನು ಗ್ರಾಮೀಣ ಭಾಗಕ್ಕಂತೂ ಬಸ್‌ಗಳು ಸಮಯಕ್ಕೆ ಸರಿಯಾಗಿ ಬರುವುದೇ ಕಡಿಮೆ. ಹೀಗೆ ಬೇರೆಡೆ ಪ್ರಯಾಣಕ್ಕೆಂದು ಬರುವ ಪ್ರಯಾಣಿಕರು ಇಲ್ಲಿಗೆ ಬಂದಾಗ ಮೊಬೈಲ್ ಹಿಡಿದುಕೊಂಡು ಇರೋದನ್ನ ಬಿಟ್ಟು, ಗ್ರಂಥಾಲಯದಲ್ಲಿ ಇರೋ ಪುಸ್ತಕಗಳ ಓದಿಕೊಂಡೆ ಹೋಗುವಂತಾಗಿದೆ. ಇಲ್ಲಿ ಕೇವಲ ಕಥೆ, ಕಾದಂಬರಿ, ಚುಟುಕು ಪುಸ್ತಕಗಳಷ್ಟೇ ಅಲ್ಲದೆ ಜ್ಞಾನಪೀಠ ಪುರಸ್ಕೃತರ ಹಾಗೂ ಸಾಧಕರ ಪುಸ್ತಕದ ಜೊತೆಗೆ ವಿದ್ಯಾರ್ಥಿಗಳಿಗೆ ಬೇಕಾದ ಪುಕಸ್ತಗಳನ್ನ ಕೂಡ ಇಡಲಾಗಿದೆ. ಹಿರಿಯರಿಗೆ ಬೇಕಾದ ಕಥೆ, ಚುಟುಕು ಸೇರಿದಂತೆ ಹತ್ತಾರು ಪುಸ್ತಕಗಳನ್ನ ಇಲ್ಲಿ ಇಡಲಾಗಿದೆ. ಪ್ರತಿನಿತ್ಯವೂ ಸಂಜೆ ಸಮಯಲ್ಲಿ ವಾಯುವಿಹಾರಕ್ಕೆಂದು ಹೋಗುವ ಹಿರಿಯರು ಸ್ವಲ್ಪ ಸಮಯ ಇಲ್ಲಿರುವ ತಮಗೆ ಬೇಕಾದ ಪುಸ್ತಕಗಳನ್ನ ಓದಿ ಹೋಗುತ್ತಿದ್ದಾರೆ. ಇದರಿಂದಾಗಿ ಇಲ್ಲಿನ ಹಿರಿಯರ ಜೊತೆ ಕಿರಿಯರು ಕೂಡ ಓದಿನತ್ತ ಗಮನ ಹರಿಸುತ್ತಿದ್ದಾರೆ.