Slide
Slide
Slide
previous arrow
next arrow

ಮಕ್ಕಳ ಸಾಹಿತ್ಯ ಕಮ್ಮಟ: ನೆಮ್ಮದಿ ಕುಟೀರದಲ್ಲಿ ಮಕ್ಕಳ ಕಲರವ

300x250 AD

ಶಿರಸಿ: ನಾವು ಸಮಾಜದ ತಾಯಿ ತಂದೆ ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಮೂಡಬೇಕು ಹಾಗಾದಾಗ ಸಮಾಜವನ್ನು ಸರಿದಾರಿಗೆ ನಡೆಸುವ ಜವಾಬ್ದಾರಿ ನಮ್ಮ ಹೆಗಲಿಗೇರುತ್ತದೆ ಎಂದು ಸಮಾಜ ಸೇವಕಿ ಹಾಗೂ ಮಕ್ಕಳ ಕೂಟದ ಅಧ್ಯಕ್ಷೆ ಶ್ರೀಮತಿ ಅನಿತಾ ಪಾರ್ವತಿಕರ ನುಡಿದರು.

ಇತ್ತೀಚೆಗೆ ನೆಮ್ಮದಿ ಕುಟೀರದಲ್ಲಿ ಸಾಹಿತ್ಯ ಚಿಂತಕರ ಚಾವಡಿ ಶಿರಸಿ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಕಮ್ಮಟ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಸಮಾಜದೆಡೆಗೆ ಮಕ್ಕಳು ಮನಸ್ಸನ್ನು ತೆರೆದಿಡುವಂತಹ ವಾತಾವರಣವನ್ನು ನಿರ್ಮಿಸಬೇಕು, ಸಾಹಿತ್ಯ ಓದು ಇದಕ್ಕೆ ಪೂರಕವಾಗಿ ಇರುವಂತಾಗಬೇಕು ಎಂದು ಅವರು ಹೇಳಿದರು.

ಕವಿ ಹಾಗೂ ನಾಟಿ ವೈದ್ಯರಾದ ಮಂಜುನಾಥ ಹೆಗಡೆ ಹೂಡ್ಲಮನೆ ಅಧ್ಯಕ್ಷತೆಯಲ್ಲಿ ನಡೆದ ಕಮ್ಮಟದ ಉದ್ದೇಶಗಳ ಕುರಿತು ಸಾಹಿತಿ ದಿವಸ್ಪತಿ ಭಟ್ಟ (ಬೆಂಗಳೂರು) ಪ್ರಾಸ್ತಾವಿಕ ನುಡಿ ಆಡಿ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ಸಾಹಿತ್ಯವನ್ನು ಮಕ್ಕಳಿಗೆ ತಲುಪಿಸಿ ಆ ಮೂಲಕ ಮುಂದಿನ ಸಾಹಿತಿಗಳನ್ನು ಸಮಾಜಕ್ಕೆ ಕೊಡುಗೆ ನೀಡುವುದು ಕಮ್ಮಟದ ಉದ್ದೇಶ ಎಂದರು. ಆಶಯ ನುಡಿ ಆಡಿದ ಹಿರಿಯ ಸಾಹಿತಿಗಳೂ, ಸಾಹಿತ್ಯ ಚಿಂತಕರ ಚಾವಡಿಯ ಸಂಸ್ಥಾಪಕರೂ ಆದ ಎಸ್.ಎಸ್. ಭಟ್, ಮನುಷ್ಯನು ಮಾತ್ರ ಆಲೋಚಿಸುವ ಶಕ್ತಿಯನ್ನು ಹೊಂದಿದ್ದು ಅದನ್ನು ಸಮಾಜದ ಒಳಿತಿಗೆ ಬಳಸುವಂತೆ ಮಕ್ಕಳಿಗೆ ಪ್ರೇರಣಾದಾಯಕ ಅನಿಸುವಂತಹ ಸಾಹಿತ್ಯವನ್ನು ಮಕ್ಕಳಿಗೆ ಓದಿಸಬೇಕು ಎಂದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ, ಬೇರೆಬೇರೆ ಪ್ರದೇಶಗಳಿಗೆ ಹೋದಂತೆ ಪರಿಸರದಲ್ಲಿ ಬದಲಾವಣೆಗಳಾಗುತ್ತವೆ. ಬದಲಾಗುವ ಆಯಾ ಪರಿಸ್ಥಿತಿಗಳು ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ ಹಾಗಾಗಿ ಸಾಹಿತ್ಯ ರಚನೆಯಲ್ಲಿ ಭಿನ್ನತೆ ಕಾಣಬಹುದು. ಮಕ್ಕಳ ಸಾಹಿತ್ಯ ಎಂದರೆ ಮೂಗು ಮುರಿಯುವಂತಹ ವಾತಾವರಣ ಹೋಗಬೇಕು. ಮಕ್ಕಳಿಗಾಗಿ ರಚಿಸಿದ ಸಾಹಿತ್ಯ ಮತ್ತು ಮಕ್ಕಳೇ ರಚಿಸಿದ ಸಾಹಿತ್ಯವನ್ನು ಓದುವ ಸ್ಥಿತಿ ನಿರ್ಮಾಣವಾಗಬೇಕು ಅಂದರು. ಕವಿ ಕೃಷ್ಣ ಪದಕಿ, ಬದುಕಿನಲ್ಲಿ ಶಿಸ್ತು ಮತ್ತು ಸಮಯ ಪ್ರಜ್ಙೆ ಅಳವಡಿಸಿಕೊಂಡು ಮಾದರಿಯೆನುವಂತಹ ಬದುಕು ನಮ್ಮದಾಗಿಸಿಕೊಳ್ಳಬೇಕು ಎಂದರು.

300x250 AD

ಒಟ್ಟು ಐದು ಅವಧಿಯ ಸಾಹಿತ್ಯ ಚಟುವಟಿಕೆಗಳನ್ನು ಒಳಗೊಂಡಿದ್ದ ಮಕ್ಕಳ ಸಾಹಿತ್ಯ ಕಮ್ಮಟ ಕವಿ ಕಥೆಗಾರ ಹಾಗೂ ಬಿಇಓ ಕಛೇರಿಯ ಅಧೀಕ್ಷಕ ಮಹೇಶಕುಮಾರ ಹನಕೆರೆ ಅಚ್ಚುಕಟ್ಟಾದ ನಿರ್ವಹಣೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದಿದ್ದು ಮೊದಲ ಅವಧಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರದ ಶಿಕ್ಷಕಿಯವರಾದ ಶ್ರೀಮತಿ ರಾಜೇಶ್ವರಿ ಹೆಗಡೆ ನಡೆಸಿಕೊಟ್ಟು ಚುಟುಕು ರಚನೆ ಮಾಡುವ ಕವಿಗಳು ಅನುಸರಿಸಬೇಕಾದ ಅಂಶಗಳನ್ನು ತಿಳಿಸಿಕೊಟ್ಟರು. ಮಕ್ಕಳಿಂದ ಚುಟುಕು ರಚನೆ ಮಾಡಿಸಲಾಯಿತು. ಎರಡನೇ ಅವಧಿಯಲ್ಲಿ ಸೊರಬದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉರಗನಹಳ್ಳಿಯ ಮುಖ್ಯ ಶಿಕ್ಷಕಿ ಶ್ರೀಮತಿ ಸುಮಿತ್ರಾ ಎಸ್. ಹೆಗಡೆ ನಡೆಸಿಕೊಟ್ಟು ಅನುನಾಸಿಕ ಆಟ ಆಡಿಸಿ, ಕಥನ ಕವನ (ಮಕ್ಕಳ ಕಥೆಯನ್ನು ಕವನವಾಗಿಸುವುದು) ಪ್ರಸ್ತುತಪಡಿಸಲಾಯಿತು. ನಂತರ ನೀಡಿದ ಶೀರ್ಷಿಕೆಗಳಿಗೆ ಮಕ್ಕಳು ಸ್ವತಃ ಕಥನ ಕವನ ರಚಿಸಿ ವಾಚನ ಮಾಡಿದರು. ಮೂರನೇ ಅವಧಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಡಿಗಾರದ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಹೆಗಡೆ ನಡೆಸಿಕೊಟ್ಟು ಕಥೆ ಎಂದರೇನು? ಹೇಗೆ ಬರೆಯಬೇಕು? ಕಥೆಯ ವಿಧಗಳು, ಪ್ರಕಾರಗಳ ಬಗ್ಗೆ ತಿಳಿಸಿಕೊಟ್ಟರು. ಭೋಜನ ವಿರಾಮದ ನಂತರ ನಾಲ್ಕನೇ ಅವಧಿಯಲ್ಲಿ ನೆಮ್ಮದಿ ಕುಟೀರದ ಬಳಿ ಇರುವ ತೋಟಕ್ಕೆ ಮಕ್ಕಳನ್ನು ಕರೆದೊಯ್ದು ಮರಗಿಡಗಳ ಪರಿಚಯವನ್ನು ಮಾಡಿಸಿದರು ಕವಯತ್ರಿ ಶ್ರೀಮತಿ ರೇವತಿ ಭಟ್ ಹೊಸಕೆರೆ ಐದನೇ ಅವಧಿಯಲ್ಲಿ ಕವಯತ್ರಿ ಶ್ರೀಮತಿ ಶೋಭಾ ಭಟ್ ತಮ್ಮ ಸ್ವರಚಿತ ಮಕ್ಕಳ ಕವನಗಳನ್ನು ಓದಿ ಹೇಳಿ ಅವುಗಳ ರಚನೆಗೆ ಅಗತ್ಯವಾಗಿ ಬೇಕಾದ ಸಿದ್ಧತೆಗಳ ಕುರಿತು ತಿಳಿಸಿಕೊಟ್ಟರು. ಕೊನೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಆಸಕ್ತ ಕವಿಗಳು ಕವನ ವಾಚನ ಮಾಡಿದರು.

ಖ್ಯಾತ ಹಿರಿಯ ಸಾಹಿತಿಗಳಾದ ಡಿ.ಎಸ್. ನಾಯ್ಕ, ಜೆ. ಎಸ್. ಹಬ್ಬು, ಜಗದೀಶ ಭಂಡಾರಿ, ದಿವಸ್ಪತಿ ಭಟ್ಟ, ಶ್ರೀಮತಿ ದಾಕ್ಷಾಯಣಿ ಪಿ.ಸಿ., ಎಸ್. ಎಂ. ಹೆಗಡೆ, ಹನುಮಂತ ಸಾಲಿ, ಕೆ.ಎಸ್. ಅಗ್ನಿಹೋತ್ರಿ ಹಾಗೂ ಸೊರಬ ತಾಲೂಕು ಸಾಹಿತ್ಯ ಪರಿಷತ್ತಿನ ಎರಡು ಬಾರಿ ಅಧ್ಯಕ್ಷರಾಗಿದ್ದ ಕೃಷ್ಣಾನಂದ ಇನ್ನೂ ಮುಂತಾದವರು ಉಪಸ್ಥಿತರಿದ್ದರು. ಕಮ್ಮಟದಲ್ಲಿ ಶಿರಸಿ ತಾಲೂಕಿನ ವಿವಿಧ ಶಾಲೆಗಳ ಮೂವತ್ತು ಮಕ್ಕಳು ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top