ಕುಮಟಾ: ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕಿದೆ. ಸುಶಿಕ್ಷಿತರ ಸಂಖ್ಯೆ ಏರಿಕೆಯಾಗಬೇಕಿದೆ. ನಮ್ಮ ಸಮಾಜ ಶೈಕ್ಷಣಿಕವಾಗಿ ಮುಂದೆ ಬರಬೇಕು. ಯುವಕರು ಹೆಚ್ಚಿನ ಶಿಕ್ಷಣ ಪಡೆದು ವಿದ್ಯಾವಂತರಾಗುವ ಮೂಲಕ ಅತ್ಯುನ್ನತ ಹುದ್ದೆ ಅಲಂಕರಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಪಟ್ಟಣದ ಚಿತ್ರಗಿಯ ಶ್ರೀರಾಮಚಂದ್ರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಉತ್ತರ ಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘದ ಅಮೃತ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮೊಟ್ಟಮೊದಲು ದಿ.ಮೋಹನ ಶೆಟ್ಟಿ ಅವರು ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಮಾಡಿ ಅಪಾರ ಜನರ ಪ್ರೀತಿ, ವಿಶ್ವಾಸ ಗಳಿಸುವ ಮೂಲಕ ನಮ್ಮ ಸಮಾಜಕ್ಕೆ ಕೀರ್ತಿ ತಂದಿದ್ದಾರೆ. ಎರಡು ಬಾರಿ ಶಾಸಕರಾಗಿ 10 ವರ್ಷಗಳ ಕಾಲ ಅತ್ಯುತ್ತಮವಾದ ಆಡಳಿತ ನಡೆಸಿದ್ದರು. ನಂತರದಲ್ಲಿ ನನಗೂ ಶಾಸಕನಾಗುವ ಅವಕಾಶ ದೊರೆಯಿತು. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಜನರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಕುಮಟಾ-ಹೊನ್ನಾವರ ಕ್ಷೇತ್ರದಲ್ಲಿ ಉತ್ತಮವಾದ, ಜನಪರವಾದ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡು ಬಂದಿದ್ದೇನೆ ಎಂದರು.
ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರೂ ಸಹ ಈ ಕ್ಷೇತ್ರದಲ್ಲಿ ಎಣಿಕೆ ಇಲ್ಲದಷ್ಟು ಕಾಮಗಾರಿಗಳನ್ನು ತರುವ ಮೂಲಕ ಅಭಿವೃದ್ಧಿ ಮಾಡಿದ್ದಾರೆ. 1800 ಕೋಟಿ ರೂ.ನಷ್ಟು ಅಭಿವೃದಿ ್ಧಕಾರ್ಯ ಮಾಡಿದ್ದೇನೆ. ಎಲ್ಲಾ ಭಾಗದಲ್ಲಿಯೂ ಕಾಮಗಾರಿ ಆಗಿದ್ದು, ಯಾರಿಗೂ ಉಪದ್ರವ ನೀಡಿಲ್ಲ. ಹೀಗಾಗಿ ಅಭಿವೃದ್ಧಿ ದೃಷ್ಟಿಯಿಂದ ಜನ ನನ್ನನ್ನು ಆಯ್ಕೆ ಮಾಡುತ್ತಾರೆಂಬ ವಿಶ್ವಾಸ ನನ್ನಲ್ಲಿತ್ತು. ಆದರೆ ಅಭಿವೃದ್ಧಿ ಗೆಲುವಿಗೆ ಕಾರಣ ಅಲ್ಲ ಎನ್ನುವುದು ಶಾರದಾ ಶೆಟ್ಟಿ ಅವರಿಗೂ ಮತ್ತು ನನಗೂ ಅರ್ಥವಾಗಿದೆ. ಪ್ರಾಮಾಣಿಕವಾದ ಅಭಿವೃದ್ಧಿ ಮಾಡಿದ್ದೇನೆ. ಇದೀಗ ಮತ್ತೆ ಶಾಸಕನಾಗಿ ಕ್ಷೇತ್ರದ ಜನ ನನಗೆ ಆಶೀರ್ವಾದ ಮಾಡಿದ್ದಾರೆ ಎಂದರು.
ನಮ್ಮ ಗಾಣಿಗ ಸಮಾಜದ ಎಲ್ಲಾ ಯುವಕರು, ಯುವತಿಯರು, ಹಿರಿಯರು ಸಂಪೂರ್ಣವಾಗಿ ಸಹಕಾರ ನೀಡಿ ಗೆಲುವನ್ನು ತಂದುಕೊಟ್ಟಿದ್ದಾರೆ. ವಿಶೇಷವಾಗಿ ನಮ್ಮ ಸಮಾಜದ ಯುವ ಬಳಗದವರು ಪ್ರಾಮಾಣಿಕವಾಗಿ ಹಗಲಿರುಳು ದುಡಿದು ನನ್ನ ಗೆಲ್ಲಿಸಿದ್ದಾರೆ. ಕೆ.ವಿ.ಶೆಟ್ಟಿ ಅವರು ಇಡೀ ಉತ್ತರ ಕನ್ನಡ ಜಿಲ್ಲೆಯ ಒಬ್ಬ ಸಮರ್ಥ ಗುತ್ತಿಗೆದಾರರಾಗಿ ಕಾರ್ಯ ನಿರ್ವಹಿಸಿದ ಕ್ರಿಯಾಶೀಲ ವ್ಯಕ್ತಿಯಾಗಿದ್ದರು. ಅವರ ಕುಟುಂಬದವರೆ ನಾವು ಎಂಬ ಭಾವನೆಯಿಂದ ನಮ್ಮ ಕ್ಷೇತ್ರದ ಜನ ನನ್ನನ್ನು ಗೆಲ್ಲಿಸಿದ್ದಾರೆ ಎಂದರು.
ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ಮಾಜಿ ಶಾಸಕಿ ಶಾರದಾ ಶೆಟ್ಟಿ ಮಾತನಾಡಿ, ಸಮಾಜದ ಕಾರ್ಯಕ್ರಮ ಎಂಬ ಹೆಗ್ಗಳಿಕೆಯಿಂದ ದೂರದ ಊರುಗಳಿಂದ ಕುಮಟಾಕ್ಕೆ ಬಂದಿರುವುದು ಖುಷಿ ನೀಡಿದೆ. ಇದೇ ರೀತಿಯ ಸಮಾಜದ ಮೇಲಿನ ಪ್ರೀತಿ-ವಿಶ್ವಾಸ ಮುಂದೆಯೂ ಸದಾ ಇರಲಿ. ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ಅವರು ಈ ಕಾರ್ಯಕ್ರಮದ ರುವಾರಿಗಳಾಗಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇಂದು ಗಾಣಿಗ ಸಮಾಜ ಅತ್ಯಂತ ಬಲಿಷ್ಠ ಮತ್ತು ಕ್ರಿಯಾಶೀಲವಾಗಿದೆ. ಗಾಣಿಗ ಸಮಾಜ ಅಭಿವೃದ್ಧಿ ಸಾಧಿಸಿದ್ದು, ನಮಗೆ ನಾವೆ ಬೆನ್ನು ತಟ್ಟಿಕೊಳ್ಳುವಂತಾಗಿದೆ. ಪೂರ್ವಜರು ನಮ್ಮ ಸಮಾಜವನ್ನು ಜವಾಬ್ದಾರಿಯಿಂದ ಬೆಳೆಸಿಕೊಂಡು ಬಂದರು. ಉನ್ನತ ಸ್ಥಾನಮಾನ ಅಲಂಕರಿಸಿ ಸಮಾಜದ ಉನ್ನತಿಗೆ ನಾಂದಿ ಹಾಡಿದ್ದಾರೆ ಎಂದರು.
ನನ್ನ ಪತಿ ಮೋಹನ ಶೆಟ್ಟಿ ಅವರು ಜನರ ನೆರವಿಗೆ ಧಾವಿಸುತ್ತಿದ್ದರು. ಜನರ ಪ್ರೀತಿ-ವಿಶ್ವಾಸ ಗಳಿಸಿದ್ದರು. ನೆಲ್ಲಿಕೇರಿ ಕಾಲೇಜಿನಲ್ಲಿ ಐವರು ಶಿಕ್ಷಕರಿಗೆ ತಾವೇ ಸಂಬಳ ನೀಡುವ ಮೂಲಕ ಶಿಕ್ಷಣ ಪ್ರೇಮ ಮೆರೆದಿದ್ದರು. ಜನರ ಕೆಲಸವನ್ನು ದೇವರ ಕೆಲಸ ಎಂದು ತಿಳಿದು ಕೆಲಸ ಮಾಡುತ್ತಿದ್ದರು. ಹಲವಾರು ಏಳು- ಬೀಳುಗಳ ನಡುವೆಯೂ ಮತ್ತೆ ನಾನು ರಾಜಕೀಯ ಪ್ರವೇಶ ಮಾಡಿ 5 ವರ್ಷದ ಅವಧಿಯಲ್ಲಿ 5 ನಿಮಿಷವೂ ಕೂರದೇ ಜನರಿಗಾಗಿ ಕೆಲಸ ಮಾಡಿದ್ದೇನೆ. ಜನರ ಈ ಪ್ರೀತಿ ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ. ದಿನಕರ ಶೆಟ್ಟಿ ಅವರೂ ಸಹ ಹಲವಾರು ಅಭಿವೃದ್ಧಿ ಮಾಡಿ ಜನಮನ ಗೆದ್ದಿದ್ದಾರೆ. ನಮ್ಮ ಸಮಾಜ ಸಣ್ಣದಾದರೂ ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ. ನಾವೆಲ್ಲರೂ ಒಟ್ಟಾಗಿ ಬಾಳೋಣ ಎಂದು ಶುಭ ಹಾರೈಸಿದರು.
ಶಿವಮೊಗ್ಗ ಜಿಲ್ಲಾ ಗಾಣಿಗ ಸಂಘದ ಮಾಜಿ ಅಧ್ಯಕ್ಷ ಎಚ್ ಸುಬ್ಬಯ್ಯ ಮಾತನಾಡಿ ರಾಜಕೀಯವಾಗಿ ಗಾಣಿಗ ಸಮಾಜದ ಮನೆತನ ಇನ್ನೂ ಮುಂದುವರಿದುಕೊAಡು ಬರುತ್ತಿರುವುದು ಖುಷಿ ನೀಡಿದೆ. ಗಾಣಿಗ ಸಮಾಜಕ್ಕೆ ದಿ.ಮೋಹನ ಶೆಟ್ಟಿ, ದಿನಕರ ಶೆಟ್ಟಿ, ಶಾರದಾ ಶೆಟ್ಟಿ ಎರಡು ಕಣ್ಣುಗಳಿದ್ದಂತೆ. ನಮ್ಮ ಸಮಾಜದಲ್ಲಿ ಹಣವಿದ್ದರೆ ಸಾಲದು ಶಿಕ್ಷಣ ಅತ್ಯವಶ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ಮಾತನಾಡಿದರು.
ಈ ಸಂದರ್ಭದಲ್ಲಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ 3ನೇ ಬಾರಿ ಆಯ್ಕೆಯಾದ ಶಾಸಕ ದಿನಕರ ಶೆಟ್ಟಿ, ಕಾರ್ಯಕ್ರಮ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ದಾಮೋದರ ಕೆ.ಶೆಟ್ಟಿ, ಗಣಪತಿ ಶೆಟ್ಟಿ, ಗಂಗಾಧರ ಶೆಟ್ಟಿ, ದೀಪಕ ಶೆಟ್ಟಿ ಹಾಗೂ ನಾಗೇಂದ್ರ ಎಂ. ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಕೇಶವ ಶೆಟ್ಟಿ, ಸಮಾಜ ಸೇವಾ ಸಂಘದ ಅಧ್ಯಕ್ಷ ಕೇಶವ ಶೆಟ್ಟಿ, ಉಡುಪಿ ಜಿಲ್ಲಾ ಸೋಮಕ್ಷತ್ರೀಯ ಗಾಣಿಗ ಸಮಾಜದ ಅಧ್ಯಕ್ಷ ಸೂರ್ಯನಾರಾಯಣ ಗಾಣಿಗ ಮಟಪಾಡಿ, ದಕ್ಷಿಣ ಕನ್ನಡ ಗಾಣಿಗರ ಸಂಘದ ಅಧ್ಯಕ್ಷ ವಿಶ್ವಾಸಕುಮಾರ ದಾಸ, ಮುಗಳಿಕೋಣೆ ಗೋಪಾಲಕೃಷ್ಣ ದೇವಸ್ಥಾನದ ಮೊಕ್ತೇಸರ ಮಹಾಬಲೇಶ್ವರ ಶೆಟ್ಟಿ, ಹೊನ್ನಾವರ ಬಾಳೆಗದ್ದೆ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಸತೀಶ ರಾವ್, ಚಿತ್ರಿಗಿಮಠ ರಾಮಚಂದ್ರ ದೇವಸ್ಥಾನದ ಮೊಕ್ತೇಸರ ಸತೀಶ ಶೆಟ್ಟಿ, ಶಿರಸಿಯ ಲಕ್ಷ್ಮೀನಾರಾಯಣ ದೇವಸ್ಥಾನದ ಅಧ್ಯಕ್ಷ ದೀಪಕ ಶೆಟ್ಟಿ ಉಪಸ್ಥಿತರಿದ್ದರು.