ಕುಮಟಾ: ನೀರಿನ ಅಭಾವ ತಲೆದೋರಿದ ಪರಿಣಾಮ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವುದು ಕಠಿಣ ಸವಾಲಾಗಿದ್ದು, ಶಾಲಾ ಪ್ರಾರಂಭೋತ್ಸವವನ್ನು ಒಂದು ವಾರ ಮುಂದೂಡಬೇಕು ಅಥವಾ ಮುಂದಿನ ಒಂದುವಾರಗಳ ಕಾಲ ತರಗತಿಗಳನ್ನು ಅರ್ಧದಿನಕ್ಕೆ ಸೀಮಿತಗೊಳಿಸಬೇಕೆಂದು ಶಾಸಕ ದಿನಕರ ಶೆಟ್ಟಿಯವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬೇಸಿಗೆ ಮುಕ್ತಾಯಗೊಂಡು ಮುಂಗಾರು ಪ್ರಾರಂಭವಾಗುವ ದಿನಗಳು ಸಮೀಪಿಸುತ್ತಿದೆ. ಶಿಕ್ಷಣ ಸಂಸ್ಥೆಗಳು ನೂತನ ಶೈಕ್ಷಣಿಕ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಪೂರ್ವ ನಿಗದಿಯಂತೆ ಮೇ 31ರಿಂದ ಸರ್ಕಾರಿ ಶಾಲೆಗಳು ಪ್ರಾರಂಭವಾಗುತ್ತಿವೆ. ಆದರೆ ಈ ವರ್ಷ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಜಲಕ್ಷಾಮ ಎದುರಾಗಿದ್ದು, ಪಟ್ಟಣ ಹಾಗೂ ಗ್ರಾಮೀಣ ಭಾಗದ ಬಹುತೇಕ ಶಾಲೆಗಳಲ್ಲಿ ಬಿಸಿಯೂಟ ತಯಾರಿಸಲು ನೀರು ಇಲ್ಲದಂತಾಗಿದೆ. ಕೆಲವೆಡೆ ಕುಡಿಯುವ ನೀರು ಕಲುಷಿತಗೊಂಡಿದ್ದು, ಅದನ್ನು ಬಳಸಿ ಅಡುಗೆ ಮಾಡಿದರೆ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗುವ ಸಂಭವವಿದೆ ಎಂದು ತಿಳಿಸಿದ್ದಾರೆ.
ಪರಿಸರದಲ್ಲಿ ತಾಪಮಾನ ಏರಿಕೆಯಾಗಿರುವುದರಿಂದ ಇದೂ ಕೂಡ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಹುದು. ಹಾಗಾಗಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಶಾಲಾ ಪ್ರಾರಂಭೋತ್ಸವವನ್ನು ಒಂದು ವಾರ ಮುಂದೂಡಬೇಕು ಅಥವಾ ಮುಂದಿನ ಒಂದುವಾರಗಳ ಕಾಲ ತರಗತಿಗಳನ್ನು ಅರ್ಧದಿನಕ್ಕೆ ಸೀಮಿತಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.