Slide
Slide
Slide
previous arrow
next arrow

ಮೊದಲ ದಿನದಿಂದಲೇ ಸೇತುಬಂಧ ಕಾರ್ಯಕ್ರಮಕ್ಕೆ ಸೂಚನೆ

300x250 AD

ಕಾರವಾರ: ಶೈಕ್ಷಣಿಕ ವರ್ಷಾರಂಭವಾದ ಮೇ 29ರಿಂದಲೇ ರಾಜ್ಯದಲ್ಲಿ ಖಾಸಗಿ ಶಾಲೆಗಳು ಆರಂಭಗೊಂಡಿದ್ದು, ಇಂದಿನಿಂದ ಎಲ್ಲ ಸರ್ಕಾರಿ ಶಾಲೆಗಳು ಪ್ರಾರಂಭವಾಗಲಿವೆ.
ಶಾಲೆಗಳ ಆರಂಭಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 1 ರಿಂದ 10ನೇ ತರಗತಿವರೆಗೂ ಶಾಲಾರಂಭದಿಂದಲೇ ಸೇತುಬಂಧ ಕಾರ್ಯಕ್ರಮ ನಡೆಸಲು ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ. ಆದರೆ ಪಠ್ಯ ಪುಸ್ತಕ ವಿತರಣೆ ವಿಳಂಬವಾಗುವ ಸಾಧ್ಯತೆ ಇದೆ.
ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಒಟ್ಟು 62, 229 ಶಾಲೆಗಳು ರಾಜ್ಯದಲ್ಲಿವೆ. ಇದರಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳ ಪ್ರಮಾಣ 25, 278, ಹಿರಿಯ ಪ್ರಾಥಮಿಕ ಶಾಲೆಗಳ ಪ್ರಮಾಣ 36,951 ಹಾಗೂ 15,867 ಮಾಧ್ಯಮಿಕ ಶಾಲೆಗಳಿವೆ. ಎಲ್ಲ ಶಾಲೆಗಳು ನಾಳೆಯಿಂದ ಆರಂಭಗೊಳ್ಳಲಿವೆ. ಈಗಾಗಲೇ ಶೈಕ್ಷಣಿಕ ವರ್ಷ ಮೇ 29ರಿಂದಲೇ ಆರಂಭವಾಗಿದ್ದು, ಅಂದಿನಿಂದಲೇ ಕೆಲ ಖಾಸಗಿ ಶಾಲೆಗಳು ಕೂಡ ಆರಂಭವಾಗಿವೆ. ಆದರೆ, ಈ ಎಲ್ಲ ಸರ್ಕಾರಿ ಶಾಲೆಗಳು ಮಾತ್ರ ಇಂದಿನಿಂದ ಆರಂಭವಾಗಲಿವೆ.
ಸರ್ಕಾರಿ ಶಾಲೆಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿ ಆಗಮಿಸಿ ಕೆಲವು ಹಿರಿಯ ತರಗತಿ ಮಕ್ಕಳು, ಪೋಷಕರ ಸಹಕಾರದೊಂದಿಗೆ ಶಾಲೆಯನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಸಿದ್ದಾರೆ. ಶಾಲೆಗಳಲ್ಲಿ ತರಗತಿ ಚಟುವಟಿಕೆಗಳ ಆರಂಭಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಶಾಲೆಗಳು ಆರಂಭವಾಗುತ್ತಿದ್ದಂತೆ 1ರಿಂದ 3ನೇ ತರಗತಿಗೆ ಆರಂಭದ 30 ದಿನಗಳು ಹಾಗೂ 4ರಿಂದ 10ನೇ ತರಗತಿ ಮಕ್ಕಳಿಗೆ 15 ದಿನಗಳ ಕಾಲ ಸೇತುಬಂಧ ಕಾರ್ಯಕ್ರಮ ನಡೆಸುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಎಲ್ಲ ಶಾಲೆಗಳಿಗೆ ಸೂಚಿಸಿದೆ.
ಮಕ್ಕಳಲ್ಲಿನ ಕಲಿಕಾ ಅಂತರ ತಗ್ಗಿಸಲು ಸೇತುಬಂಧವನ್ನು ಸರ್ಕಾರ ಹಮ್ಮಿಕೊಂಡಿದ್ದು, 1ರಿಂದ 10ನೇ ತರಗತಿಗಳಿಗೆ ಸೇತುಬಂಧ ಶಿಕ್ಷಣದ ಸಾಹಿತ್ಯ ಮತ್ತು ವಿನ್ಯಾಸವನ್ನು ಸಿದ್ಧಪಡಿಸಿ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ಶಾಲಾ ಹಂತದಲ್ಲಿ ಸೇತುಬಂಧ ಶಿಕ್ಷಣವನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗುವಂತೆ ಹಾಗೂ ಶಿಕ್ಷಕರ ಸಾಮರ್ಥ್ಯ ಅಭಿವೃದ್ಧಿಗಾಗಿ ಈ ಸಾಹಿತ್ಯ ಸಿದ್ಧಪಡಿಸಿದೆ. ಮಕ್ಕಳ ವಯೋಮಾನ ಮತ್ತು ತರಗತಿಗೆ ಅನುಗುಣವಾಗಿ ಕಲಿಕಾ ಮಟ್ಟ ಹಾಗೂ ಸಾಮರ್ಥ್ಯ ಗುರುತಿಸಿ ಮುಂದಿನ ಕಲಿಕೆಗೆ ಸಿದ್ಧಗೊಳಿಸಲು ಕಲಿತಿರುವ ಮತ್ತು ಕಲಿಯುತ್ತಿರುವ ಪರಿಕಲ್ಪನೆಗಳ ಅಂತರದ ನಡುವೆ ಸಂಬಂಧ ಕಲ್ಪಿಸುವುದು ಸೇತು ಬಂಧ ಶಿಕ್ಷಣದ ಉದ್ದೇಶವಾಗಿದೆ.
ಮಕ್ಕಳ ಕಲಿಕಾ ಅನುಭವಗಳನ್ನು ಆಧರಿಸಿ ರಸಪ್ರಶ್ನೆ, ಲಿಖಿತ ಅಥವಾ ಮೌಖಿಕ ಪ್ರಶ್ನೋತ್ತರ, ಸರಳ ಯೋಜನೆಗಳು, ಸಂಭಾಷಣೆ, ಸರಳ ಚಟುವಟಿಕೆಗಳು, ಅಭ್ಯಾಸ ಹಾಳೆಗಳನ್ನು ಪೂರ್ಣಗೊಳಿಸಿರುವುದು, ಮನೆಪಾಠ ಹಾಗೂ ಇನ್ನಿತರ ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡುವುದು. ಸೇತುಬಂಧದ ಬಳಿಕವೂ ವಿದ್ಯಾರ್ಥಿಗಳಲ್ಲಿ ಸಾಮರ್ಥ್ಯಗಳಿಕೆ ಆಗಿರದಿದ್ದಲ್ಲಿ ಅಂತಹವರನ್ನು ಗಮನಿಸಿ ಆಯಾ ತರಗತಿ ಪಠ್ಯ ಬೋಧನಾ ಸಂದರ್ಭದಲ್ಲಿ ಪೂರ್ವ ಸಿದ್ಧತಾ ಚಟುವಟಿಕೆಗಳನ್ನು ನೀಡುವಾಗ ಸಾಮರ್ಥ್ಯಗಳಿಗೆ ವಿಶೇಷ ಆದ್ಯತೆ ನೀಡಿ ಕಲಿಕೆಗೆ ಅನುಕೂಲ ಕಲ್ಪಿಸುವಂತೆ ಸೂಚಿಸಿದೆ.
ಈಗಾಗಲೇ ಎಲ್ಲ ಶಾಲೆಗಳಿಗೆ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರಗಳ ಪೂರೈಕೆ ಮಾಡಲಾಗಿದ್ದು, ಈ ಬಾರಿ ಪಠ್ಯಪುಸ್ತಕ ಹಾಗೂ ಸಮವಸ್ತ್ರ ಶಾಲೆಗಳ ಆರಂಭದಲ್ಲೇ ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸದ್ಯ ಪಠ್ಯ ಪುಸ್ತಕ ಪರಿಷ್ಕರಣೆ ವಿಷಯ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಠ್ಯ ಪುಸ್ತಕ ವಿತರಣೆಯಲ್ಲಿ ಸ್ವಲ್ಪ ವಿಳಂಬವಾಗಲಿದೆ ಎನ್ನಲಾಗುತ್ತಿದೆ. ಆದರೆ ಮೊದಲ ದಿನವೇ ಸಮವಸ್ತ್ರ ವಿತರಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

300x250 AD
Share This
300x250 AD
300x250 AD
300x250 AD
Back to top