Slide
Slide
Slide
previous arrow
next arrow

ನೌಕಾನೆಲೆ ವಿಮಾನ ನಿಲ್ದಾಣದ ಹಠಾತ್ ಸರ್ವೆ ಯತ್ನ; ರೈತರಿಂದ ತಡೆ

300x250 AD

ಅಂಕೋಲಾ: ತಾಲೂಕಿನ ಅಲಗೇರಿಯಲ್ಲಿ ಸೀಬರ್ಡ್ ನೌಕಾನೆಲೆಯ ರಕ್ಷಣಾ ಮತ್ತು ನಾಗರಿಕ ವಿಮಾನ ನಿಲ್ದಾಣಕ್ಕೆ ಸ್ಥಳ ನಿಗದಿಸಿದ್ದು, ಯಾವುದೇ ಪೂರ್ವ ಸೂಚನೆ ನೀಡದೆಯೇ ತಹಶೀಲ್ದಾರ ಹಾಗೂ ತಂಡ ಸರ್ವೇ ಕಾರ್ಯಕ್ಕೆ ಮುಂದಾಗಿದ್ದು, ಸ್ಥಳೀಯರ ತೀವ್ರ ವಿರೋಧದಿಂದಾಗಿ ಸರ್ವೇ ಕಾರ್ಯ ಸ್ಥಗಿತಗೊಳಿಸಿದ ಘಟನೆ ನಡೆದಿದೆ.
ಉಪವಿಭಾಗಾಧಿಕಾರಿ ಸೂಚನೆಯ ಮೇರೆಗೆ ತಹಶೀಲ್ದಾರ್ ಪ್ರವೀಣ ಹುಚ್ಚಣ್ಣನವರ ನೇತೃತ್ವದ ತಂಡ ಸಂಪೂರ್ಣ ಪೊಲೀಸ್ ಬಲದೊಂದಿಗೆ ಸರ್ವೇ ಕಾರ್ಯ ಪ್ರಾರಂಭಿಸಿದ್ದು ಗಮನಿಸಿದ ಸ್ಥಳೀಯರು ತಕ್ಷಣ ಸ್ಥಳಕ್ಕಾಗಮಿಸಿದ್ದಾರೆ. ಈಗಾಗಲೇ ರಕ್ಷಣಾ ಇಲಾಖೆಗಾಗಿ ನೂರಾರು ಎಕರೆ ಬಂಗಾರದಂತ ಭೂಮಿಯನ್ನು ಕವಡೆ ಕಾಸಿನ ಬೆಲೆಗೆ ನೀಡಿದ್ದೇವೆ. ಈಗ ಮತ್ತೆ ಪ್ರದೇಶದಲ್ಲಿ ಮತ್ತೆ ಸುಮಾರು 97 ಎಕರೆ ಜಾಗವನ್ನು ತಮ್ಮ ಸುಪರ್ದಿಗೆ ಪಡೆಯಲು ಬಂದಿದ್ದಾರೆ. ಗ್ರಾಮಸ್ಥರ ಮುಗ್ಧತೆಯನ್ನೇ ಬಂಡವಾಳವಾಗಿಸಿಕೊಂಡು ತಾವು ಹೇಗೆ ಬೇಕಾದರೂ ಇವರನ್ನು ಬಳಸಿಕೊಳ್ಳಬಹುದು ಎನ್ನುವಂತೆ ಸರ್ವೇ ಕಾರ್ಯ ನಡೆಸಿದ್ದು ಶೋಚನೀಯ.
ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ರೈತ ಗೌರೀಶ ನಾಯಕ ಎರಡೆರಡು ಬಾರಿ ಭೂಮಿ ಕಳೆದುಕೊಂಡು ನಿರಾಶ್ರಿತರಾಗಿರುವ ನಮಗೆ ಸರಕಾರ ಸೂಕ್ತ ಪರಿಹಾರ ನೀಡಿಲ್ಲ. ಈಗ ಮತ್ತೆ ಸ್ವಾಧೀನಕ್ಕೆ ಮುಂದಾಗಿದ್ದರೂ ನಮಗೆ ಯಾವುದೇ ಅಡ್ಡಿ ಇಲ್ಲ ಆದರೆ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಸೂಕ್ತ ಪರಿಹಾರ ನೀಡಿ ಇಲ್ಲದಿದ್ದರೆ ಒಂದಿಂಚು ಭೂಮಿಯನ್ನು ಸಹ ಬಿಡುವುದಿಲ್ಲ ಮತ್ತು ನಮ್ಮ ಬೇಡಿಕೆ ಈಡೇರಿಕೆಗೆ ನಾವು ಎಂತಹ ಹೋರಾಟಕ್ಕೂ ಸಿದ್ಧ ಎಂದರು.
ಈ ಹಿಂದೆ ಉಪವಿಭಾಗಾಧಿಕಾರಿ ತಂಡ ಭೂಮಿಯ ಮೌಲ್ಯವನ್ನು 1 ಲಕ್ಷಕ್ಕೆ ನಿಗದಿಸಿ 16 ಅಂಶಗಳ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿತ್ತು. ಗ್ರಾಮಸ್ಥರ ವಿರೋಧದಿಂದಾಗಿ ಸರ್ಕಾರ ಸದ್ರಿ ವರದಿ ಕೈಬಿಟ್ಟಿದ್ದು ಹೂಸ ವರದಿ ಸಿದ್ಧವಾಗಬೇಕಿದೆ.
ಗ್ರಾಮಸ್ಥರ ಪರವಾಗಿ ಮಾತನಾಡಿದ ಸುರೇಶ ನಾಯಕ ಹೊಸ ವರದಿ ತಯಾರಿಸಬೇಕು. ತರಿ ಭೂಮಿಗೆ 4.5 ರಿಂದ 5 ಲಕ್ಷ ಪರಿಹಾರ, ಭಾಗಾಯತ್ ಗೆ 6 ರಿಂದ 7 ಲಕ್ಷ, ಸ್ವಾಧೀನಪಡಿಸಿಕೊಂಡ ಜಾಗಕ್ಕೆ ಪ್ರತಿಯಾಗಿ ಅಷ್ಟೇ ಜಾಗ ಹಾಗೂ ಸೂಕ್ತ ಮೂಲ ಸೌಕರ್ಯಗಳಾದ ನೀರು, ಗಾಳಿ ಹಾಗೂ ಉತ್ತಮ ವಾತಾವರಣ ಇರುವ ಕಡೆ ಪುನರ್ವಸತಿ ನೀಡಬೇಕು ಎಂಬ ಬೇಡಿಕೆಯನ್ನು ಈಗಾಗಲೇ ಸಲ್ಲಿಸಿದ್ದೇವೆ. ಅದೇ ಅಂಶಗಳನ್ನು ಆಧರಿಸಿ ಫಲಾನುಭವಿಗಳ ಪಟ್ಟಿ ತಯಾರಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಿಪಿಐ ಡಿಸೋಜಾ, ಪಿಎಸೈ ಮಹಾಂತೇಶ ನೇತೃತ್ವದ ತಂಡ, ಕಂದಾಯ ಇಲಾಖೆಯ ತಂಡ, ಗ್ರಾಮಸ್ಥರಾದ ಶಿವಾನಂದ ನಾಯ್ಕ ಹಾಗೂ ಸಮಸ್ತ ಗ್ರಾಮಸ್ಥರು ಇದ್ದರು.

300x250 AD
Share This
300x250 AD
300x250 AD
300x250 AD
Back to top