ಕುಮಟಾ: ಹೊನ್ನಾವರ ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆಯನ್ನು ಶಾಸ್ವತವಾಗಿ ಪರಿಹಾರ ಒದಗಿಸುವ ಶರಾವತಿ ಯೋಜನೆ ಶಾಸಕ ದಿನಕರ ಶೆಟ್ಟಿ ಅವರ ಸತತ ಪ್ರಯತ್ನದಿಂದ ಪೂರ್ಣಗೊಂಡಿದ್ದು, ಇನ್ನೆರಡು ದಿನಗಳಲ್ಲಿ ನೀರು ಪೂರೈಕೆಯಾಗಲಿದೆ.
ಹೊನ್ನಾವರ ಪಟ್ಟಣದ ಜನತೆಗೆ ಕುಮಟಾ ಪುರಸಭೆಯಿಂದ ಪೂರೈಕೆಯಾಗುವ ಮರಾಕಲ್ ಕುಡಿಯುವ ನೀರಿನ ಯೋಜನೆಯೇ ಆಸರೆಯಾಗಿತ್ತು. ಆದರೆ ಬೇಸಿಗೆ ಗಾಲದಲ್ಲಿ ದೀವಳ್ಳಿ ಭಾಗದಲ್ಲಿ ಅಘನಾಶಿನಿ ನದಿ ನೀರು ಬತ್ತುಹೋಗುವುದರಿಂದ ಕುಡಿಯುವ ನೀರಿನ ಸಮಸ್ಯೆ ಹೊನ್ನಾವರ ಜನತೆಗೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿತ್ತು. ಅಲ್ಲದೇ ಕುಮಟಾದಿಂದ ಪೈಪ್ ಲೈನ್ ಮೂಲಕ ಹೊನ್ನಾವರಕ್ಕೆ ನೀರು ತಲುಪುವಾಗ ಪೈಪ್ ಲೈನ್‍ನಲ್ಲಿ ಅಥವಾ ಇನ್ನಿತರೆ ತಾಂತ್ರಿಕ ಸಮಸ್ಯೆಯಾದರೆ ಹೊನ್ನಾವರಕ್ಕೆ ಸರಬರಾಜಾಗುವ ನೀರಿನ ಪೂರೈಕೆ ಸ್ಥಗಿತಗೊಂಡು ಜನರಿಗೆ ಸಮಸ್ಯೆಯಾಗುತ್ತಿತ್ತು.
ಹಾಗಾಗಿ ಹೊನ್ನಾವರದಲ್ಲಿ ಪ್ರತ್ಯೇಕ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲು ಶರಾವತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು. ಆದರೆ ಕಳೆದ ಐದು ವರ್ಷಗಳಿಂದ ಕುಂಟುತ್ತ ಸಾಗುತ್ತಿರುವ ಶರಾವತಿ ಯೋಜನೆಯ ಕಾಮಗಾರಿ ಈಗ ಪೂರ್ಣಗೊಂಡಿದೆ. ಕಾಮಗಾರಿಗೆ ಪ್ರತಿ ಹಂತದಲ್ಲಿ ಎದುರಾದ ಸಮಸ್ಯೆಯನ್ನು ಪರಿಹರಿಸಿಕೊಡುವ ಮೂಲಕ ಜನತೆಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಶಾಸಕರು ಸಾಕಷ್ಟು ಪ್ರಯತ್ನ ಮಾಡಿದ್ದಾರೆ.
ಅದರ ಫಲವಾಗಿ ಇಂದು ಶರಾವತಿ ಯೋಜನೆಯ ಕಾಮಗಾರಿ ಪೂರ್ಣಗೊಂಡು, ಪ್ರಯೋಗಾರ್ಥವಾಗಿ ನೀರನ್ನು ಬಿಡಲಾಯಿತು. ನೀರು ಗೇರುಸೊಪ್ಪದಿಂದ ಪೈಪ್ ಲೈನ್ ಮೂಲಕ ಹೊನ್ನಾವರದಲ್ಲಿ ನಿರ್ಮಿಸಲಾದ ಟ್ಯಾಂಕ್ ಗೆ ಯಶಸ್ವಿಯಾಗಿ ತಲುಪಿದೆ. ಪೈಪ್ ಹಾಗೂ ಸರಬರಾಜು ಘಟಕ ಶುದ್ಧೀಕರಣವಾಗಿ, ಇನ್ನೆರಡು ದಿನಗಳಲ್ಲಿ ಪರಿಶುದ್ಧ ಕುಡಿಯುವ ನೀರು ಪ್ರಭಾತನಗರದ ಜನರಿಗೆ ಲಭ್ಯವಾಗಲಿದೆ.
ಈ ಶರಾವತಿ ಯೋಜನೆಯು ಒಟ್ಟು 122 ಕೋಟಿ ರೂ ಕಾಮಗಾರಿಯಾಗಿದೆ. ಕೊನೆಯ ಹಂತದಲ್ಲಿ ತಲೆದೋರಿದ ಕೆಲವು ತಾಂತ್ರಿಕ ಅಡಚಣೆಗಳ ಕಾರಣದಿಂದ ಕಾಮಗಾರಿ ಪೂರ್ಣಗೊಳ್ಳಲು ವಿಳಂಬವಾಗಿತ್ತು. ಅಧಿಕಾರಿಗಳೊಂದಿಗೆ ಹಾಗೂ ಅಭಿಯಂತರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಶಾಸಕರು, ಸಭೆಗಳನ್ನು ಕರೆದು, ಆಗಾಗ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಅಡಚಣೆಗಳನ್ನು ನಿವಾರಿಸಲುವಲ್ಲಿ ಯಶಸ್ವಿಯಾಗುವ ಮೂಲಕ ಹೊನ್ನಾವರ ಜನತೆಗೆ ಎದುರಾದ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ದೂರ ಮಾಡಿದ್ದಾರೆ. ಇನ್ನೆರಡು ದಿನಗಳಲ್ಲಿ ಹೊನ್ನಾವರ ಪಟ್ಟಣದ ಜನತೆಗೆ ನೀರಿನ ಪೂರೈಕೆ ನಡೆಯಲಿದೆ ಎಂದು ಶಾಸಕ ದಿನಕರ ಶೆಟ್ಟಿ ಅವರು ತಿಳಿಸಿದ್ದಾರೆ.